
ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧೀಜಿ ಅವರ ಐತಿಹಾಸಿಕ ಸಂವಾದ ಶತಮಾನೋತ್ಸವ ಇದೇ 3 ರಂದು ಪಕ್ಷಾತೀತವಾಗಿ, ಎಲ್ಲ ಧರ್ಮದ ಜನರ ಸಹಕಾರದಲ್ಲಿ ಕೊಣಾಜೆಯಲ್ಲಿ ನಡೆಯಲಿದ್ದು ಈ ಕಾರ್ಯಕ್ರಮವು ಇತಿಹಾಸದ ಪುಟದಲ್ಲಿ ದಾಖಲಾಗಲಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಅವರು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು, ಶಿವಗಿರಿ ಮಠದ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕೆ.ಸಿ.ವೇಣುಗೋಪಾಲ್ ಸೇರಿದಂತೆ, ಸ್ವಾಮೀಜಿಗಳು, ಗಣ್ಯರು ಭಾಗವಹಿಸಲಿರುವ ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಇದಕ್ಕೆ ಪೂರಕವಾಗಿ ಜನರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಸಮಾಜದ ಯುವಕರು, ವಿದ್ಯಾರ್ಥಿ ಸಮುದಾಯ, ಮಕ್ಕಳಿಗೆ ಜನಜಾಗೃತಿ ಹಾಗೂ ಮುಂದಿನ ದಿನಗಳಲ್ಲಿ ಸೌಹಾರ್ದ ಸಮಾಜ ನಿರ್ಮಾಣಕ್ಕೆ ಹಾಗೂ ಸಂತರ, ಮಹಾಪುರುಷರ ತತ್ವಾದರ್ಶಗಳನ್ನು ಅರ್ಥೈಸಿ, ಮೈಗೂಡಿಸಿಕೊಳ್ಳಲು ಸಹಕಾರಿ ಆಗಲಿದೆ ಎಂದರು.
ಕಾರ್ಯಕ್ರಮದ ಸಂಚಾಲಕ ರಕ್ಷಿತ್ ಶಿವರಾಂ ಅವರು ಮಾತನಾಡಿ, ಈ ಐತಿಹಾಸಿಕ ಕಾರ್ಯಕ್ರಮದ ಯಶಸ್ಸಿಗಾಗಿ ಎಲ್ಲ ಗ್ರಾಮದ ಜನರು ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ. ನಾರಾಯಣ ಗುರುಗಳ ಅಧ್ಯಯನ ಪೀಠ ಕೊಣಾಜೆಯಲ್ಲಿ ಇರುವುದರಿಂದ ಕಾರ್ಯಕ್ರಮವನ್ನು ಕೊಣಾಜೆಯಲ್ಲೇ ಆಯೋಜಿಸಲಾಗಿದ್ದು ಇದೊಂದು ಸೌಹಾರ್ದತೆ ಸಂಭ್ರಮ ಆಗಲಿದೆ ಎಂದರು.
ಕೇರಳ ತಿರುವನಂತಪುರ ಶಿವಗಿರಿ ಮಠ ವರ್ಕಳದ ಜ್ಞಾನತೀರ್ಥ ಸ್ವಾಮೀಜಿ, ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಮಠದ ಪೀಠಾಧಿಪತಿ ವಿಖ್ಯಾತನಂದ ಸ್ವಾಮೀಜಿ, ಕೊಣಾಜೆ ಪಂಚಾಯತ್ ಅಧ್ಯಕ್ಷೆ ಗೀತಾ ದಾಮೋದರ್, ಮಾಧ್ಯಮ ಸಂಯೋಜಕ ಪ್ರೊ.ಸೋಮಣ್ಣ ಹೊಂಗಳ್ಳಿ, ಸಂಯೋಜಕ ಡಾ.ಧನಂಜಯ ಕುಂಬ್ಳೆ, ಡಾ.ನಾಗಪ್ಪ ಗೌಡ, ಮೂಡದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಸಿಂಡಿಕೇಟ್ ಸದಸ್ಯ ಅಚ್ಯುತ ಗಟ್ಟಿ, ಕೊಣಾಜೆ ಪಂಚಾಯತ್ ಮಾಜಿ ಅಧ್ಯಕ್ಷರಾದ ನಝರ್ ಷಾ ಪಟ್ಟೋರಿ, ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕರಾದ ಡಾ. ಜಯರಾಜ್, ಮುಖಂಡರಾದ ಎನ್ ಎಸ್ ಕರೀಂ, ಟಿ.ಎಸ್. ಅಬ್ದುಲ್ಲಾ, ಅಬ್ದುಲ್ ರಹಿಮಾನ್ ಕೋಡಿಜಾಲ್, ರವೀಂದ್ರ ಬಂಗೇರ, ಎ.ಕೆ. ರಹಿಮಾನ್ ಕೋಡಿಜಾಲ್, .ಎಂ.ಪಾರೂಕ್ , ಸತ್ಯಜಿತ್ ಸುರತ್ಕಲ್ ಇದ್ದರು.


