
ಮಂಗಳೂರು (ತಲಪಾಡಿ): ಇಲ್ಲಿನ ಶಾರದಾ ವಿದ್ಯಾನಿಕೇತನ ಪಿಯುಸಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ವಿದ್ಯಾರ್ಥಿಗಳು ಮಾತ್ರವಲ್ಲದೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿ ಸಾಂಪ್ರದಾಯಿಕ ಉಡುಗೆ ದಿರಿಸಿನಲ್ಲಿ ಬಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಚಿಲುಮೆ ಆದರು.

ಪ್ರಾಂಶುಪಾಲ ವಿನಾಯಕ್ ಬಿ.ಜಿ ಮತ್ತು ಉಪ ಪ್ರಾಂಶುಪಾಲ ಸುರೇಶ್ ಭಟ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಪ್ರತ್ಯೇಕ ತರಗತಿಯ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಕ್ಯಾಟ್ ವಾಕ್ ಮೂಲಕ ರ್ಯಾಂ ಪ್ ಮೇಲೆ ಮಿಂಚಿದರು. ಈ ವೇಳೆ ಅವರ ಸ್ನೇಹಿತರು ಹಾಗೂ ಸಹಪಾಠಿಗಳು ಅವರನ್ನು ಪ್ರೋತ್ಸಾಹಿಸಿದರು.
ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳ ಸಂಸ್ಕೃತಿ ,ಸಂಪ್ರದಾಯದ ಉಡುಗೆ ತೊಡುಗೆಗಳು ಪ್ರದರ್ಶಿಸಲ್ಪಟ್ಟವು. ಮೊದಲ ಸುತ್ತಿನಲ್ಲಿ ಆರು ವಿದ್ಯಾರ್ಥಿಗಳು ಆಯ್ಕೆಗೊಂಡರು. 2ನೇ ಸುತ್ತಿನಲ್ಲಿ ಅವರ ವೇಷ ಭೂಷಣ, ನಡೆ ಹಾಗೂ ಮಾತಿನ ಲಹರಿಯನ್ನು ಗಮನಿಸಿ ಸಾಂಪ್ರದಾಯಿಕ ರಾಜ ಹಾಗೂ ಸಾಂಪ್ರದಾಯಿಕ ರಾಣಿ ಆಯ್ಕೆ ಮಾಡಲಾಯಿತು.
ಕೊಡಗಿನ ಮದುವೆ ಹೆಣ್ಣಿನ ವೇಷಭೂಷಣ ಧರಿಸಿದ್ದ ವೇದಿಕೆಯಲ್ಲಿ ಮಿಂಚಿದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನ್ಮಯ ಕೆ. ಸಿ ಅವರು ಸಾಂಪ್ರದಾಯಿಕ ರಾಣಿ ಆಗಿ ಹೊರಹೊಮ್ಮಿದರು. ಇನ್ನು ಮಿಜೋರಾಮ ವಿಶಿಷ್ಟ ಉಡುಗೆ ಧರಿಸಿದ ದ್ವಿತೀಯ ಪಿಯುಸಿ ಜೋಹನ್ ಕುಮಾರ್ ಸಾಂಪ್ರದಾಯಿಕ ರಾಜನಾಗಿ ಆಯ್ಕೆಯಾದರು.
ರಾಜ, ರಾಣಿ ಆಗಿ ಆಯ್ಕೆ ಆದ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಭೌತಶಾಸ್ತ್ರ ಉಪನ್ಯಾಸಕ ಪ್ರದೀಪ್ ರೈ ಮತ್ತು ಗಣಕ ವಿಜ್ಞಾನ ಉಪನ್ಯಾಸಕಿ ರಶ್ಮಿ ನಿರೂಪಿಸಿದರು. ಕನ್ನಡ ಉಪನ್ಯಾಸಕ ಸುರೇಶ್ ರಾವ್ ಅತ್ತೂರು, ಉಪನ್ಯಾಸಕಿ ವರ್ಷ ಪ್ರಶಾಂತ್ ಮತ್ತು ಗಣಕ ವಿಜ್ಞಾನ ಉಪನ್ಯಾಸಕ ಸುನಿಲ್ ಕುಮಾರ್ ತೀರ್ಪುಗಾರರಾಗಿದ್ದರು.


