ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ರಾಮೀಣ ಜನತೆ, ಅಶಕ್ತರು, ಮಹಿಳೆ ಮತ್ತು ಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೂ ಸುಲಭ ರೀತಿಯಲ್ಲಿ ಕಾನೂನು ಸೇವೆ ಮತ್ತು ನೆರವು ಒದಗಿಸುವ ಉದ್ದೇಶದಿಂದ ಕಾರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ 1 ವರ್ಷಗಳ ಅವಧಿಗೆ ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ. ಅವರು ಮಂಗಳವಾರ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶಿಕ್ಷಕರು/ ನಿವೃತ್ತ ಶಿಕ್ಷಕರು, ಮಾಜಿ ಪಂಚಾಯತ ಸದಸ್ಯರು, ವಿವಿಧ ಇಲಾಖೆಗಳಿಂದ ನಿವೃತ್ತರಾದ ಸರಕಾರಿ ನೌಕರರು, ಹಿರಿಯ ನಾಗರಿಕರು, ಕಾನೂನು ಸೇವೆಗಳಲ್ಲಿ ತೊಡಗಿರುವ ಸಮಾಜ ಸೇವಕರು, ಮಹಿಳೆಯರು, ಟ್ರಾನ್ಸ್ಜೆಂಡರಗಳು, ಪಂಗಡ ಸಮುದಾಯದವರು, ಅಲ್ಪಸಂಖ್ಯಾತರು, ಇತರ ಗೌರವಾನಿತ್ವ ವ್ಯಕ್ತಿಗಳು, ಎಂಎಸ್‌ಡಬ್ಲೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು/ ಚಿಕಿತ್ಸಕರು, ವಿದ್ಯಾರ್ಥಿಗಳು ಮತ್ತು ಕಾನೂನು ವಿದ್ಯಾರ್ಥಿಗಳು (ವಕೀಲರಾಗಿ ನೋಂದಣಿ ಮಾಡಿಕೊಳ್ಳುವವರೆಗೆ), ರಾಜಕೀಯೇತರ ಸೇವಾ ಮನೋಭಾವ ಹೊಂದಿರುವ ಎನ್.ಜಿ.ಒ.ಗಳು ಮತ್ತು ಕ್ಲಬ್ ಗಳ ಸದಸ್ಯರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು, ಮೈತ್ರಿ ಸಂಘಗಳು ಮತ್ತು ಉತ್ತಮ ವರ್ತನೆ ಹೊಂದಿರುವ ದೀರ್ಘಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಶಿಕ್ಷಣ ಪಡೆದ ಖೈದಿಗಳು, ಮೃತ ರಕ್ಷಣಾ ಸಿಬ್ಬಂದಿ ವಿಧವೆಯರು, ಮಾಜಿ ಸೈನಿಕರು ಅಥವಾ ನಾಗರೀಕ ಪ್ರದೇಶಗಳಲ್ಲಿ ವಾಸಿಸುವ ಅವರ ಅವಲಂಭಿತರು, ಪ್ರಸ್ತುತ ಸೇವೆಯಲ್ಲಿರುವ ರಕ್ಷಣಾ ಸಿಬ್ಬಂದಿ ಪತ್ನಿ ಅಥವಾ ವಯಸ್ಕ ಮಕ್ಕಳು
ಕನಿಷ್ಠ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿರುವವರು ಸೇರಿದಂತೆ ಜಿಲ್ಲೆಯಲ್ಲಿ 50 ರಿಂದ 100 ಜನರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಆಯ್ಕೆಯಾದ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಅಗತ್ಯ ತರಬೇತಿ ಮತ್ತು ಗುರುತಿನ ಚೀಟಿ ನೀಡಲಿದ್ದು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಗೆ ಸಂಬಂಧಪಟ್ಟ ಚಟುವಟಿಕೆಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಹಾಜರಾಗಿ, ಪಾಲ್ಗೊಂಡಿದ್ದಲ್ಲಿ ಅವರಿಗೆ ರೂ.750 ಗೌರವಧನ ಮತ್ತು ಅರ್ಧ ದಿನ ಕೆಲಸ ಮಾಡಿದ್ದಲ್ಲಿ ರೂ. 375 ರಂತೆ ಗೌರವಧನ ನೀಡಲಾಗುವುದು. ಪ್ರಾಧಿಕಾರದ ಇನ್ನಿತರ ಉಪಯುಕ್ತ ಸಾರ್ವಜನಿಕ ಸಮಸ್ಯೆಗಳ ಬಗೆಹರಿಸುವಲ್ಲಿ ಅವರಿಗೆ ತಗುಲುವ ಮೂಲ/ಸಾಮಾನ್ಯ ಪ್ರಯಾಣದ ಖರ್ಚ ಅನ್ನು ನೀಡಲಾಗುವುದು ಎಂದರು.
ಆಸಕ್ತರು ತಮ್ಮ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯ ಆವರಣ, ಕಾರವಾರ ಇವರಿಗೆ ಅಕ್ಟೋಬರ್ 10 ರೊಳಗಾಗಿ ಸಲ್ಲಿಸಬಹುದು ಮತ್ತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ 08382-222990 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.