Breaking News

ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡಿ ಬೇಡಿಕೆ ಸಲ್ಲಿಸಿ: ಜಿಲ್ಲಾ ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ

 

ಅಂಕೋಲಾ: ಮಹಾತ್ಮ ಗಾಂಧಿ ನರೇಗಾ ಯೋಜನೆ ಸೌಲಭ್ಯಗಳನ್ನು ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಲಾಗುತ್ತಿದೆ. ಗ್ರಾಮೀಣ ಭಾಗದ ಜನರು, ರೈತರು ಗ್ರಾ.ಪಂಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವುದರ ಜತೆಗೆ ಸ್ಮಾರ್ಟ್ ಫೋನ್‌ನಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನರೇಗಾ ಯೋಜನೆ ಅಡಿ ಹೆಸರು ನೋಂದಣಿ ಮಾಡಿಕೊಂಡು, ಅಗತ್ಯ ಇರುವ ಕೂಲಿ ಕೆಲಸ ಹಾಗೂ ಕಾಮಗಾರಿ ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ  ಎಂದು ಜಿಲ್ಲಾ ಪಂಚಾಯತ್‌ ಜಿಲ್ಲಾ ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಹೇಳಿದರು.

ಅಂಕೋಲಾ ತಾಲ್ಲೂಕಿನ ಬೆಳಂಬಾರ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ  2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಕೆಗಾಗಿ ಮಂಗಳವಾರ ಆಯೋಜಿಸಿದ್ದ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನದಲ್ಲಿ ಅವರು ಮಾತನಾಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಆಯುಕ್ತಾಲಯದ ಆದೇಶ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್‌ನ ಮೇಲಧಿಕಾರಿಗಳ ನಿರ್ದೇಶನದಂತೆ   2025-26ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆ ಕಾರ್ಮಿಕ ಆಯವ್ಯಯ ತಯಾರಿಕೆಗಾಗಿ ತಾಲ್ಲೂಕಿನ 21 ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ ಆಯೋಜನೆ ಮಾಡಲಾಗುತ್ತಿದೆ ಎಂದರು.

ಕೂಲಿಕಾರರು, ಗ್ರಾಮಸ್ಥರು ಗ್ರಾಪಂ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವುದರ ಜೊತೆಗೆ ತಮ್ಮ ಬಳಿ ಇರುವ ಸ್ಮಾರ್ಟ್ ಫೋನ್ ಮೂಲಕ ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡಿ, ತಮಗೆ ಬೇಕಿರುವ ಕಾಮಗಾರಿಗೆ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದಾಗಿದೆ. ತಾಲೂಕಿನ ವ್ಯಾಪ್ತಿಯಲ್ಲಿ ಬರುವ 21 ಗ್ರಾಪಂಗಳಲ್ಲಿ ನರೇಗಾದಡಿ ಉದ್ಯೋಗ ಖಾತ್ರಿ ನಡಿಗೆ ಸಬಲತೆಯೆಡೆಗೆ ವಿಶೇಷ ಅಭಿಯಾನದಡಿ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ ಪ್ರತಿ ಮನೆ-ಮನೆಗೆ ಭೇಟಿ ನೀಡಿ ಬೇಡಿಕೆಗೆ ಅರ್ಜಿ ಸ್ವೀಕರಿಸುವುದು. ಗ್ರಾಪಂ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಾದ ಅಂಗನವಾಡಿ, ಗ್ರಂಥಾಲಯ ಕೇಂದ್ರ, ಹಾಲು ಉತ್ಪಾದಕ ಸಂಘದ ಸ್ಥಳದಲ್ಲಿ ನರೇಗಾ ಬೇಡಿಕೆ ಪೆಟ್ಟಿಗೆ ಇಡುವುದು. ಈ ಕುರಿತು ಗ್ರಾಪಂ ಸ್ವಚ್ಛ ವಾಹಿನಿಯಲ್ಲಿ ಜಾಗೃತಿ ಜಿಂಗಲ್ಸ್‌ ಗಳ ಮೂಲಕ ಪ್ರಚಾರ ನಡೆಸಿ ಬೇಡಿಕೆ ಸಂಗ್ರಹಿಸಲಾಗುವುದು ಎಂದು ಹೆಳಿದರು.

ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಜ್ಯೋತಿ ದಿಗಂಬರ ಖಾರ್ವಿ ಹಾಗೂ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹಸ್ಮತ್ ಫರವಿನ ಖಾನ್ ಅವರು ಅಭಿಯಾನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಗ್ರಾ.ಪಂ. ದ್ವಿತಿಯ ದರ್ಜೆ ಲೆಕ್ಕ ಸಹಾಯಕ ಈಶ್ವರ ಹಳ್ಳೇರ, ತಾಂತ್ರಿಕ ಸಹಾಯಕ ಅಭಿಯಂತರ ಮಹೇಶ, ಕ್ಲರ್ಕ್ ಕಂ ಡಿಇಒ ಮಂಜುನಾಥ ಮಡಿವಾಳರ, ಸ್ವಚ್ಚತಾಗಾರ ವಿಶ್ವನಾಥ ನಾಯ್ಕ, ನೀರುಗಂಟಿ ನಾಗರತ್ನ ಖಾರ್ವಿ, ಗ್ರಂಥಪಾಲಕ ಸಿಂಧೂ ಆಗೇರ, ಬಿಲ್ ಕಲೆಕ್ಟರ್ ಮಂಜುನಾಥ ಗೌಡ, ವಿಆರ್‌ಡಬ್ಲ್ಯೂ ಬಿ.ಬಿ. ಗೌಡ ಸೇರಿದಂತೆ ಗ್ರಾಮಸ್ಥರು ಇದ್ದರು.

  1.  

Leave a Reply

Your email address will not be published. Required fields are marked *