Breaking News

ಮಾತಾ ಅಮೃತಾನಂದಮಯಿ ಅಸಂಖ್ಯಾತ ಜನರ ಹೃದಯದಲ್ಲಿ ಜ್ಯೋತಿ ಬೆಳಗಿದ ಶಕ್ತಿ: ಕಿಶೋರ್ ಆಳ್ವ

 

ಮಂಗಳೂರು:  ವಿಶ್ವಹೃದಯ ದಿನದಂದು ಅಮ್ಮನ ಜನ್ಮ ದಿನ ಆಚರಣೆ ಮಾಡುತ್ತಿರುವುದು ಅರ್ಥಪೂರ್ಣ. ಪ್ರೇಮ ಮತ್ತು ಕರುಣೆ ತುಂಬಿದ ಹೃದಯ ಅಮ್ಮನ ವಿಶೇಷತೆ ಆಗಿದ್ದು, ವಿಶ್ವದ ಅಸಂಖ್ಯಾತ ಜನರ ಹೃದಯ ಜ್ಯೋತಿ ಬೆಳಗಿ ಅವರ ಬಾಳಿಗೆ ಬೆಳಕು ನೀಡಿದ್ದಾರೆ ಎಂದು ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು.

ಮಾತಾ ಅಮೃತಾನಂದಮಯಿ ದೇವಿ ಅವರ 71ನೇ ಜನ್ಮದಿನವನ್ನು ಅಂಗವಾಗಿ ಭಾನುವಾರ ಸಂಘ ನಿಕೇತನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಮ್ಮನ ಮಾನವೀಯ ಸೇವೆ, ಕರಾವಳಿ ಕರ್ನಾಟಕದಲ್ಲಿನ ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಅಮ್ಮನ ಅಂತಃಕರುಣದಿಂದ ಎಲ್ಲ ಜನರ ಪ್ರೀತಿ ಆಧರಗಳಿಗೆ ಪಾತ್ರವಾಗಿದ್ದಾರೆ ಎಂದರು.

ಮಠದ ಮುಖ್ಯಸ್ಥೆ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಶ್ರೀಗುರು ಪಾದುಕಾ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಅಮ್ಮನ ಗರ್ಭದಲ್ಲಿ ಮಗು ಇರುವಾಗ ಮಗುವಿಗೆ ಬೇಕಾದ ಪೋಷಕಾಂಶಗಳು ಆ ತಾಯಿಯಿದಲೇ ಲಭಿಸುತ್ತದೆ. ಶರೀರ ಮತ್ತು ಮನಸ್ಸುಗಳ ಸೃಷ್ಟಿ ಅಲ್ಲಿಂದಲೇ ಆಗುತ್ತದೆ. ಅದೇ ರೀತಿಯಲ್ಲಿ ನಾವು ವಿಶ್ವಮಾತೆಯ ಆಶ್ರಯದಲ್ಲಿ ಇದ್ದೇವೆ ಎಂದರು.

  1.  

ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಮಾತನಾಡಿ, 144 ಕೋಟಿ ಜನಸಂಖ್ಯೆಯ ಭಾರತವು ಅಧಿಕ ಮಾನವ ಸಂಪನ್ಮೂಲವನ್ನು ಹೊಂದಿರುವ ರಾಷ್ಟ್ರ. ಆದರೆ, ಇಂದು ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದ್ದರೂ ಭ್ರಷ್ಟತೆ ಸರ್ವ ವ್ಯಾಪಿಯಾಗಿದೆ. ಹಾಗಾಗಿ ಇಂದು ಸಾಧುಸಂತರ ಮಾರ್ಗದರ್ಶನ ಅತ್ಯಂತ ಅವಶ್ಯ. ಅಮ್ಮನವರು ಶೈಕ್ಷಣಿಕ, ಆರೋಗ್ಯ ಕ್ಷೇತ್ರದ ಜೊತೆಗೆ ಮನುಷ್ಯರ ಮಧ್ಯೆ ಇರುವ ಕಂದಕಗಳನ್ನು ದೂರ ಮಾಡುವ ಕಾರ್ಯ ಶ್ಲಾಘನೀಯ ಎಂದರು.

ಅಮ್ಮನವರ ಜೀವನವನ್ನು ಆಧರಿಸಿದ ಕಥಾಮೃತ ಕಾರ್ಯಕ್ರಮವನ್ನು  ಗಣೇಶ್ ಎರ್ಮಾಳ್ ಪ್ರಸ್ತುತಪಡಿಸಿದರು. ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಆಗಿ ವೃತ್ತಿಪರತೆ ಮೆರೆದ ಮಂಗಳೂರಿನ ದಿಶಾ ಅಮೃತ್ ಅವರನ್ನು  ಸನ್ಮಾನಿಸಲಾಯಿತು. ಅಮೃತ ಆರೋಗ್ಯ ಸೇವಾ ಯೋಜನೆ ಹಾಗೂ ವಸ್ತ್ರದಾನದ ವಿತರಣೆ ನಡೆಯಿತು.

ಮೂರೂ ಜಿಲ್ಲೆಗಳ ವಿವಿಧ ಸೇವಾ ಸಮಿತಿಗಳಿಗೆ 2024-26 ಅವಧಿಗೆ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು.

ಡಾ.ಜೀವರಾಜ್ ಸೊರಕೆ ಅವರು ಅಮ್ಮನ ಜತೆಗಿನ  ಅನುಭವಾಮೃತಗಳನ್ನು ಹಂಚಿಕೊಂಡರು.

ಮಂಗಳೂರಿನ ಸೇವಾ ಸಮಿತಿ ಅಧ್ಯಕ್ಷ ಡಾ.ವಸಂತಕುಮಾರ ಪೆರ್ಲ ಅವರು ಸ್ವಾಗತಿಸಿದರು. ಉಡುಪಿ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ಕೊಡವೂರು ವಂದಿಸಿದರು. ಡಾ.ದೇವದಾಸ್ ಪುತ್ರನ್ ನಿರೂಪಿಸಿದರು.

ದಕ್ಷಿಣ ಕನ್ನಡ, ಉಡುಪಿ , ಉತ್ತರ ಕನ್ನಡ ಜಿಲ್ಲೆ ಹಾಗೂ ಮುಂಬೈ ಅಮ್ಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಎಲ್ಲರಿಗೂ ಅಮೃತ ಭೋಜನ, ಪ್ರಸಾದ ವಿತರಣೆ ಮಾಡಲಾಯಿತು.

  1.  

Leave a Reply

Your email address will not be published. Required fields are marked *