ಬೆಂಗಳೂರು: ಹೋಟೆಲ್ಗಳಿಗೆ ಗ್ಯಾಸ್ ಸಿಲಿಂಡರ್‌ಗಳನ್ನು ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲು ಸದ್ಯದ ಸ್ಥಿತಿಯಲ್ಲಿ ಸಾಧ್ಯ ಆಗುತ್ತಿಲ್ಲ. ಪರಿಣಾಮ ನಿಯಮಿತ ಆಹಾರ ತಯಾರಿಸಲು ಎಲೆಕ್ಟ್ರಿಕ್ ಸ್ಟೌವ್ ಅನ್ನು ಬಳಸುವಂತೆ ಹೋಟೆಲ್ ಮಾಲೀಕರಿಗೆ ಆಹಾರ ಇಲಾಖೆ ಸಚಿವ ಕೆ. ಎಚ್. ಮುನಿಯಪ್ಪ ಅವರು ಶುಕ್ರವಾರ ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ಸದಸ್ಯ ಎಂ.ನಾಗರಾಜ್ ಹಾಗೂ ಐವನ್ ಡಿಸೋಜ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದರು.
ತೈಲ ಕಂಪನಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಆಸ್ಪತ್ರೆ, ಹಾಸ್ಟೆಲ್ ಹಾಗೂ ವಸತಿ ಶಾಲೆಗಳಿಗೆ ಆದ್ಯತೆಯ ನೆಲೆಯಲ್ಲಿ ಕರ್ಮಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಸಲು ಸೂಚನೆ ನೀಡಲಾಗಿದೆ. ಹೋಟೆಲ್ಗಳಿಗೆ ಸಿಲಿಂಡರ್ ಪೂರೈಸಲು ಸದ್ಯದ ಮಟ್ಟಿಗೆ ಸಂಗ್ರಹ ಸಾಕಾಗುವಷ್ಟು ಇಲ್ಲ. 10 ದಿನಗಳವರೆಗೆ ಮಾಲೀಕರು ತಾಳ್ಮೆಯಿಂದ ಇರಬೇಕು. ಅಲ್ಲಿವರೆಗೆ ಎಲೆಕ್ಟ್ರಿಕ ಸ್ಟೌವ್ ಮೂಲಕ ಆಹಾರ ತಯಾರಿಸಬೇಕು ಎಂದರು.
ಹಾರ್ಮುಜ್ ಜಲಸಂಧಿಯಿಂದ ಈಗಾಗಲೇ ಎರಡು ಹಡಗುಗಳು ಭಾರತಕ್ಕೆ ಬಂದಿವೆ. ಇನ್ನೂ ಹತ್ತು ಹಡಗು ಸಿಕ್ಕು ಹಾಕಿಕೊಂಡಿದ್ದು, ಅಲ್ಲಿಂದ ಬಂದ ಬಳಿಕ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ವಹಿಸಲಾಗುತ್ತದೆ ಎಂದರು.



