ಕಾರವಾರ: ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಾರವಾರ– ಬೆಂಗಳೂರಿಗೆ ನೂತನ ನಾನ್ ಎಸಿ ಪಲ್ಲಕ್ಕಿ ಬಸ್ ಗಳಿಗೆ ಕಾರವಾರ ಬಸ್ ನಿಲ್ದಾಣದಲ್ಲಿ ಕಾರವಾರ ಅಂಕೋಲಾ ಶಾಸಕ ಸತೀಶ್ ಸೈಲ್ ಅವರು ಚಾಲನೆ ನೀಡಿದರು.
ಈ ವೇಳೆ ಅವರು ಮಾತನಾಡಿ, ಕಾರವಾರ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ್ದು, ಬೆಂಗಳೂರಿಗೆ ಸುಸಜ್ಜಿತ ಸರ್ಕಾರಿ ಬಸ್ ಸೌಲಭ್ಯವನ್ನು ಒದಗಿಸಲಾಗಿದ್ದು, ಇನ್ನು 2 ಹೆಚ್ಚುವರಿ ಪಲ್ಲಕ್ಕಿ ಬಸ್ ಗಳನ್ನು ಮತ್ತು ಮಲ್ಟಿ ಆ್ಯಕ್ಸ್ ಲ್ ವೋಲ್ವೋ ಬಸ್ ಸೌಲಭ್ಯ ಒದಗಿಸಲಾಗುವುದು ಎಂದರು.

ಈಚೆಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಉದ್ಘಾಟಿಸಿದ ನೂತನ ಸೇತುವೆ ಮೂಲಕವೇ ಬಸ್ ಸಂಚರಿಸಲಿದೆ. ಈ ನೂತನ ಬಸ್ ಸೌಕರ್ಯವನ್ನು ಒದಗಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸರ್ಕಾರದ ಪರವಾಗಿ ಧನ್ಯವಾದ ಸಲ್ಲಿಸಲಿದ್ದೇನೆ ಎಂದರು.
ಶಕ್ತಿ ಯೋಜನೆಯು ಸಾರಿಗೆ ಸಂಸ್ಥಗೆ ಆರ್ಥಿಕ ಶಕ್ತಿ ಒದಗಿಸಿದ್ದು, ಈ ವರ್ಷ ವಾಯುವ್ಯ ಕರ್ನಾಟಕ ಸಾರಿಗೆ ಉತ್ತರ ಕನ್ನಡ ವಿಭಾಗ 13 ಕೋಟಿ ಲಾಭವಾಗಿದೆ. ಇದಕ್ಕೆ ಮುಖ್ಯ ಕಾರಣ ಸಂಸ್ಥೆಯ ಚಾಲಕ ನಿರ್ವಾಹಕರು. ಕಾರವಾರಕ್ಕೆ 15 ಹೊಸ ಬಸ್ ಬಂದಿವೆ ಎಂದರು

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ ಯೋಜನೆಯಿಂದಾಗಿ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎಂಬ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕುತ್ತೇನೆ. ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ ನಷ್ಟದಲ್ಲಿದೆ ಎಂದು ಹಲವರು ಹೇಳುತ್ತಿದ್ದಾರೆ. ಆದರೆ ನಮ್ಮ ಜಿಲ್ಲಾ ವಿಭಾಗವು ಈ ವರ್ಷ ಬರೋಬ್ಬರಿ 13 ಕೋಟಿ ರೂಪಾಯಿಗಳ ಲಾಭವನ್ನು ಗಳಿಸಿದೆ. ಈ ಸಾಧನೆಗೆ ಶ್ರಮ ವಹಿಸಿ ಕೆಲಸ ಮಾಡಿದ ವಿಭಾಗೀಯ ಅಧಿಕಾರಿಗಳು, ಮ್ಯಾನೇಜರ್ ಹಾಗೂ ವಿಶೇಷವಾಗಿ ಚಾಲಕರು ಮತ್ತು ನಿರ್ವಾಹಕರು (ಕಂಡಕ್ಟರ್) ಕಾರಣೀಕರ್ತರು ಎಂದರು.
ಮಹಿಳಾ ಅಧಿಕಾರಿಗಳು ಅಥವಾ ಆರ್ಥಿಕವಾಗಿ ಸಬಲರಾಗಿರುವ ಮಹಿಳೆಯರು ಇಚ್ಛಿಸಿದರೆ ಸ್ವಯಂ ಪ್ರೇರಿತರಾಗಿ ಟಿಕೆಟ್ ಖರೀದಿಸಿ ಪ್ರಯಾಣಿಸಬಹುದು. ಇದಕ್ಕೆ ಯಾವುದೇ ನಿರ್ಬಂಧವಿಲ್ಲ, ಆರ್ಥಿಕವಾಗಿ ಶಕ್ತರಾದವರು ಟಿಕೆಟ್ ಪಡೆದು ಹೋಗಲು ಮುಕ್ತ ಅವಕಾಶವಿದೆ ಎಂಸಿದರು.
ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ರಾಜೇಂದ್ರ ರಾಣೆ, ಡಿಪೋ ಮೆನೇಜರ್ ಸೌಮ್ಯ ನಾಯ್ಕ ಇದ್ದರು.
ಇಂದಿನಿಂದ ಸಂಚಾರ ಶುರು
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಕಾರವಾರ- ಬೆಂಗಳೂರು ನಡುವೆ ನೂತನ ನಾನ್ ಎ ಸಿ ಸ್ಲೀಪರ್ ಪಲ್ಲಕ್ಕಿ ಬಸ್ ಸೇವೆಯು ಇದೇ 11 ರಿಂದ ಆರಂಭವಾಗಲಿದ್ದು, ಈ ಬಸ್ ಪ್ರತಿದಿನ ಅಂಕೋಲಾ-ಗೋಕರ್ಣ-ಸಿರಸಿ-ದಾವಣಗೆರೆ- ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರು ತಲುಪಲಿದೆ ಎಂದು ಸಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರವಾರದಿಂದ ಸಂಜೆ 7.30 ಕ್ಕೆ ಹೊರಟು, ಅಂಕೋಲಾ ರಾತ್ರಿ.8.15, ಗೋಕರ್ಣ 8.50, ಶಿರಸಿ 10.45 ಹಾಗೂ ಬೆಂಗಳೂರಿಗೆ ಬೆ.7.30 ಕ್ಕೆ ತಲುಪಲಿದ್ದು, ಬೆಂಗಳೂರಿನಿಂದ ರಾತ್ರಿ 8.15 ಕ್ಕೆ ಹೊರಟು ಬೆಳಿಗ್ಗೆ 8 ಗಂಟೆಗೆ ಕಾರವಾರ ತಲುಪಲಿದೆ. ಈ ಬಸ್‌ಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಲು ಆನ್‌ಲೈನ್ ಬುಕ್ಕಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



