
ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಅವಕಾಶ ನೀಡಿದರೇ ಬಾಕಿ ಉಳಿದ ಇನ್ನು 2 ವರ್ಷವೂ ನಾನೇ ಬಜೆಟ್ ಮಂಡಿಸುವೆ ಎಂದು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯ ಬೆನ್ನಲ್ಲೆ ಕಾಂಗ್ರೆಸ್ ನಲ್ಲಿ ತಲ್ಲಣ ಉಂಟಾಗಿದ್ದು, ಈ ಹೇಳಿಕೆಯ ಬೆನ್ನಲ್ಲೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನವದೆಹಲಿಗೆ ಜಿಗಿದಿದ್ದಾರೆ. ಇದು ಬಾರಿ ಕುತೂಹಲಕ್ಕೆ ಕಾರಣ ಆಗಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಅಲ್ಲಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ನವದೆಹಲಿ ತೆರಳಿದ್ದಾರೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ನವದೆಹಲಿಗೆ ತೆರಳುತ್ತಿರುವುದಾಗಿ ಡಿ.ಕೆ.ಶಿವಕುಮಾರ್ ಕಚೇರಿ ಮಾಹಿತಿ ನೀಡಿದೆ. ಆದರೆ ವಿಧಾನ ಮಂಡಲ ಬಜೆಟ್ ಅಧಿವೇಶನದ ಸಂದರ್ಭದಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನರ್ ರಚನೆ ಸಂಬಂಧ ಚರ್ಚೆಗಳು ಬಿರುಸುಗೊಂಡಿವೆ. ಈ ಮಧ್ಯೆ ಡಿ.ಕೆ.ಶಿವಕುಮಾರ್ ನವದೆಹಲಿ ಭೇಟಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪ ಚುನಾವಣೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) 5 ಮಹಾನಗರ ಪಾಲಿಕೆಗಳು, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳು ನಡೆಯಬೇಕಿದೆ. ಈ ಸಂದರ್ಭದಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರಬೇಕಾದರೆ ‘ಸಮರ್ಥ ನಾಯಕತ್ವ ಬೇಕು’ ಎಂಬ ಬೇಡಿಕೆಯನ್ನು ಡಿ.ಕೆ.ಶಿವಕುಮಾರ್ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಶಿವಕುಮಾರ್ ಅವರಿಗೆ ನಿಷ್ಠರಾಗಿರುವ ಕೆಲವು ಶಾಸಕರು, ವಿಧಾನಸಭೆಯ ಬಜೆಟ್ ಅಧಿವೇಶನದ ನಂತರ ತಮ್ಮ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಪಕ್ಷದ ಹೈಕಮಾಂಡ್ ಅನ್ನು ಒತ್ತಾಯಿಸಲು ನವದೆಹಲಿಗೆ ಪ್ರಯಾಣಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಬಜೆಟ್ ಅಧಿವೇಶನ ಮಾರ್ಚ್ 27 ರಂದು ಮುಕ್ತಾಯಗೊಳ್ಳಲಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಆರು ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಶಿವಕುಮಾರ್ ಅವರು ಮಾರ್ಚ್ 10 ರಂದು ಎಲ್ಲಾ ಸಚಿವರು, ಕಾಂಗ್ರೆಸ್ ಶಾಸಕರು ಮತ್ತು ಎಂಎಲ್‌ಸಿಗಳಿಗೆ ಭೋಜನ ಕೂಟ ಆಯೋಜಿಸಿದ್ದಾರೆ. ಭೋಜನ ಕೂಟವನ್ನು ಎಲ್ಲ ಶಾಸಕರ ವಿಶ್ವಾಸ ಗಳಿಸುವುದಕ್ಕಾಗಿ ಏರ್ಪಡಿಸಿದ್ದಾರೆಂದು ಹೇಳಲಾಗುತ್ತಿದ್ದರೂ, ಇದೇ ಸಮಯದಲ್ಲಿ ನವದೆಹಲಿಗೆ ದೌಡಾಯಿಸಿರುವುದು ಹಲವು ರಾಜಕೀಯ ಅಚ್ಚರಿಗೆ ಕಾರಣ ಆಗಿದೆ.



