9 ರಂದು ಬಜೆಟ್ ಕುರಿತು ಶಾಸಕರಿಗೆ ಕಾರ್ಯಾಗಾರ: ಸ್ಪೀಕರ್ ಯು.ಟಿ. ಖಾದರ್

 

 

ಮಂಗಳೂರು: ಬಜೆಟ್ ಅಧಿವೇಶನದ ಮಹತ್ವ ಹಾಗೂ ರಾಜಸ್ವ ಸಂಗ್ರಹ, ಆರ್ಥಿಕ ವ್ಯವಸ್ಥೆಯ ವಿಚಾರ, ಅನುದಾನಗಳ ವರ್ಗೀಕರಣ ಮತ್ತು ಹಂಚಿಕೆ, ಬಳಕೆ ಯಾವ ರೀತಿ ಇರುತ್ತದೆ ಎಂಬುದರ ಕುರಿತು ಎಲ್ಲ ಶಾಸಕರಿಗೆ ಕಾರ್ಯಾಗಾರವು ಇದೇ 9 ರಂದು ಆಯೋಜನೆ ಮಾಡಲಾಗಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಾಗಾರವನ್ನು ಸಿಎಂ ಸಿದ್ಧರಾಮಯ್ಯ ನಡೆಸಿಕೊಡಲಿದ್ದು, 17ನೇ ಬಾರಿಗೆ ಬಜೆಟ್ ಮಂಡಿಸಿ, ಆರ್ಥಿಕ ವ್ಯವಸ್ಥೆ ನಿರ್ವಹಣೆ ಬಗ್ಗೆ ಸಂಪನ್ಮೂಲ ಹಾಗೂ ಜ್ಞಾನ ಇರುವ ವ್ಯಕ್ತಿ ಮುಖ್ಯಮಂತ್ರಿ ಸಿದ್ಧರಾಮಯ್ಯ. ಅವರನ್ನು ಹೊರತುಪಡಿಸಿ ಬೇರೆ ಯಾರೂ ಸಿಗಲಾರರು. ಅವರೇ ಮಾಹಿತಿ ನೀಡಲಿದ್ದು, ಶಾಸಕರು ಈ ಬಗ್ಗೆ ಯಾವುದೇ ರೀತಿಯ ಸಂಶಯ, ಅನುಮಾನಗಳನ್ನು ಈ ಕಾರ್ಯಾಗಾರದಲ್ಲಿ ಪರಿಹರಿಸಿಕೊಳ್ಳಬಹುದು ಎಂದರು.

ಬಜೆಟ್‌ ಭಾಷಣದ ಚರ್ಚೆಯಲ್ಲ. ಶಾಸಕರು ಮುಂದೆ ಹಣಕಾಸು ಸಚಿವರೂ ಆಗಬಹುದು, ಹಾಗಾಗಿ ಅವರೆಲ್ಲರಿಗೂ ಹಣಕಾಸಿನ ನಿರ್ವಹಣೆ ಮತ್ತು ಹಂಚಿಕೆ ಕುರಿತಂತೆ ಮಾಹಿತಿಯನ್ನು ಒದಗಿಸುವ ಉದ್ದೇಶ ಈ ಕಾರ್ಯಾಗಾರದ್ದು. ಇಂತಹ ಕಾರ್ಯಾಗಾರ ಇದೇ ಮೊದಲ ಬಾರಿಗೆ ನಡೆಯಲಿದೆ. ಎಲ್ಲ ಶಾಸಕರು ತಪ್ಪದೇ ಹಾಜರಿರುವಂತೆ ತಿಳಿಸಲಾಗಿದೆ ಎಂದರು.

ಕೆಲ ಶಾಸಕರಿಗೆ ಅನುದಾನ ಸಿಗುತ್ತಿಲ್ಲ ಎಂಬ ಆರೋಪಕ್ಕೆ ಈ ಕಾರ್ಯಾಗಾರದಿಂದ ಉತ್ತರ ಸಿಗಲಿದೆಯೇ ಎಂಬ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ನಾನು ಚರ್ಚೆ ಮಾಡಲ್ಲ. ಆದರೆ, ಅಲ್ಲಲ್ಲಿ ಶಾಸಕರು ಉದ್ಘಾಟನೆ, ಶಂಕುಸ್ಥಾಪನೆ ಮಾಡುವುದನ್ನು ಮಾಧ್ಯಮದಲ್ಲಿ ಗಮನಿಸುತ್ತಿರುತ್ತೇನೆ. ಅದು ಯಾವ ಅನುದಾನದಲ್ಲಿ ಆಗುತ್ತಿದೆ ಎಂಬುದು ಗೊತ್ತಿಲ್ಲ. ಪ್ರತಿಯೊಬ್ಬರ ಅಭಿಪ್ರಾಯ ಭಿನ್ನ ಆಗಿದ್ದು, ಸ್ಪೀಕರ್ ಆಗಿ ನಾನು ಅದಕ್ಕೆ ಪ್ರತಿಕ್ರಿಯಿಸಲ್ಲ ಎಂದರು.

ಸಾಲ ಮಾಡಿ ಬಜೆಟ್ ಮಂಡಿಸಲಾಗಿದೆ ಎಂಬ ಟೀಕೆ‌ ವ್ಯಕ್ತವಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಟೀಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಸೌಂದರ್ಯ. ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್ ವರಿಗೆ ಟೀಕೆ ಸಹಜ. ತಿಂಗಳ ಅಧಿವೇಶನ ಇದೆ. ಅಲ್ಲಿ ಚರ್ಚೆ ಆಗುತ್ತದೆ ಎಂದರು.

ಉಳ್ಳಾಲ ಕ್ಷೇತ್ರ ವಿಂಗಡನೆ ಆದ ಬಳಿಕ ಬಂಟ್ವಾಳ ತಾಲೂಕಿನ ಸಜಿಪ, ಇರಾ, ಚೇಳೂರು, ಕುರ್ನಾಡು ಮೊದಲಾದ ಪೊಲೀಸ್ ಠಾಣೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ಇಡಲಾಗಿತ್ತು. ಗಲಾಟೆಗೆ ಮಾತ್ರವಲ್ಲ, ಪಾಸ್‌ಪೋರ್ಟ್ ಸೇರಿದಂತೆ ಇತರ ಕಾರ್ಯಗಳಿಗೂ ಪೊಲೀಸ್ ಠಾಣೆ ಅಗತ್ಯ ಇದೆ ಎಂದರು.

ನೇತ್ರಾವತಿ ಹಳೆದಂಡೆಯ ಕಲ್ಲಾಪುವಿನಿಂದ ಸಜಿಪದವರೆಗೆ ನದಿ ಬದಿಯ ರಸ್ತೆ ಕಾಮಗಾರಿಗೆ 10 ಕೋಟಿ ರೂಪಾಯಿವರೆಗೆ ಕೆಲಸ ಆಗಿದೆ. ಮತ್ತೆ 50 ಕೋಟಿ ರೂಪಾಯಿ ಮಂಜೂರಿ ಆಗಿದೆ. ಉಳ್ಳಾಲದಲ್ಲಿ ಶ್ರಮಿಕ ಸ್ಕೂಲ್ ಮಂಜೂರು ಆಗಿದೆ. ತಲಾ 60 ಕೋಟಿ ರೂ. ವೆಚ್ಚದಲ್ಲಿ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ರಾಜ್ಯಕ್ಕೆ 10 ಮಂಜೂರಿ ಆಗಿವೆ. ಒಂದು ಜಿಲ್ಲೆಗೆ ಒದಗಿಸಲು ಬೇಡಿಕೆ ಇಡಲಗಾಗಿದೆ ಎಂದರು.

  1.  

Leave a Reply

Your email address will not be published. Required fields are marked *