ಸಿರಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಉತ್ತರ ಕನ್ನಡ ಜಿಲ್ಲೆಯ ಪಾಲಿಗೆ ಕೇವಲ ಬೋಗಸ್ ಆಗಿದೆ. ಇದು ಜನರ ಕಣ್ಣೋರೆಸುವ ತಂತ್ರ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸಿರುವುದು ಕೇವಲ 100 ಕೋಟಿ ರೂಪಾಯಿಗಳಲ್ಲಿ. ಇಂದು ಒಂದು ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೇ 10 ರಿಂದ 20 ಕೋಟಿ ಬೇಕು. ನೂರು ಕೋಟಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಲು ಸಾಧ್ಯವೇ? ಇದರಲ್ಲಿ ಎಷ್ಟು ಬೆಡ್‌ಗಳಿವೆ, ಕಾರ್ಡಿಯಾಲಜಿ ಅಥವಾ ನೆಫ್ರಾಲಜಿ ವಿಭಾಗಗಳಿವೆ? ಎಷ್ಟು ಹಾಸಿಗೆ ಎಂಬ ಯಾವ ಸ್ಪಷ್ಟನೆಯೂ ಇಲ್ಲ. 400 ಕೋಟಿ ರೂಪಾಯಿ ಬೇಕಾಗುವ ಇಂತಹ ಯೋಜನೆಗೆ ಇಷ್ಟು ಕಡಿಮೆ ಹಣ ಮೀಸಲಿಟ್ಟಿರುವುದು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಮಾಡುತ್ತಿರುವ ಗಿಮಿಕ್ ಅಷ್ಟೆ ಎಂದು ಕಿಡಿಕಾರಿದರು.
ಕಾರವಾರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕ್ರೆಡಿಟ್ ಪಡೆಯಲು ಕಾಂಗ್ರೆಸ್ ಸರ್ಕಾರ ಹವಣಿಸುತ್ತಿದೆ. ಆದರೆ, ಈ ಕಟ್ಟಡವು ಮಾಜಿ ಶಾಸಕಿ ರೂಪಾಲಿ ನಾಯ್ಕ್ ಅವರ ವಿಶೇಷ ಪ್ರಯತ್ನ ಹಾಗೂ 2021ರ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಮಂಜೂರಾದ 166 ಕೋಟಿ ರೂ. ಅನುದಾನದಿಂದ ನಿರ್ಮಾಣಗೊಂಡಿದೆ. ಕೇಂದ್ರ ಸರ್ಕಾರ ಕೂಡ ಇದಕ್ಕೆ 16 ಕೋಟಿ ರೂ. ನೀಡಿದೆ. ಸಿದ್ಧವಾದ ಕಟ್ಟಡವನ್ನು ಉದ್ಘಾಟಿಸಿ ನಾವು ಮಾಡಿದ್ದು ಎನ್ನುವುದು ಕಾಂಗ್ರೆಸ್ ನಾಟಕೀಯ ನಡೆಯಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಉದ್ಘಾಟಿಸಿ ತಮ್ಮದೇ ಸಾಧನೆ ಎನ್ನುವಂತೆ ಬಿಂಬಿಸಿದ್ದಾರೆ, ಈಗ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 100 ಕೋಟಿ ರೂ. ಅನುದಾನ ನೀಡುವುದಾಗಿ ಹೇಳುವ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರ ಮಾಡಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ದೃಷ್ಟಿಯಿಂದ ಘೋಷಣೆ ಮಾಡಲಾದ ಚುನಾವಣಾ ಗಿಮಿಕ್ ಎಂದು ದೂರಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನದಿಂದ ಸಿರಸಿಯಲ್ಲಿ 142 ಕೋಟಿ ರೂ. ವೆಚ್ಚದ ಆಸ್ಪತ್ರೆ ಕಾಮಗಾರಿ ಶೇ. 80ರಷ್ಟು ಮುಗಿದಿದ್ದರೂ, ಕಳೆದ ಒಂದೂವರೆ ವರ್ಷ ಕಳೆದರೂ ಸರ್ಕಾರ ಈವರೆಗೆ ವೈದ್ಯರ ನೇಮಕಾತಿ ಮಾಡಿಲ್ಲ. ವೈದ್ಯಕೀಯ ಉಪಕರಣಗಳಿಗಾಗಿ ಇಟ್ಟಿದ್ದ 30 ಕೋಟಿ ಹಣವನ್ನು 5 ಕೋಟಿಗೆ ಇಳಿಸುವ ಮೂಲಕ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಸೌಲಭ್ಯಗಳನ್ನು ಕಿತ್ತುಕೊಳ್ಳಲಾಗಿದೆ. ಬಜೆಟ್ ನಲ್ಲಿ ಶಿರಸಿ ಆಸ್ಪತ್ರೆಗೂ ಯಾವುದೇ ಅನುದಾನ ಘೋಷಣೆ ಮಾಡಲಾಗಿಲ್ಲ. ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಕುಮಟಾದಲ್ಲಿ ಘೋಷಣೆಯಾದ ಆಸ್ಪತ್ರೆಗೆ ಹಣ ನೀಡದೆ, ಹೊಸದಾಗಿ ಆಸ್ಪತ್ರೆ ಮಾಡುತ್ತೇವೆ ಎನ್ನುವುದು ಜನರನ್ನು ಮರಳು ಮಾಡುವ ಟೋಪಿ ಹಾಕುವ ಬಜೆಟ್ ಆಗಿದೆ ಎಂದು ಅನಂತಮೂರ್ತಿ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು.
ಉತ್ತರಕನ್ನಡ ಜಿಲ್ಲೆಗೆ ಯಾವುದೇ ವಿಶೇಷ ಅನುದಾನ ಇಲ್ಲ, ಅಲ್ಲದೇ ರೈತ ವಲಯಕ್ಕೂ ಯಾವುದೇ ಅನುಕೂಲ ಮಾಡಿಕೊಡುವಂಥ ಕೊಡುಗೆ ಇಲ್ಲ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡಿ ಜಿಲ್ಲೆಗಳು ಸೇರಿ ಅಡಿಕೆ ಬೆಳೆಗಾರರು ಅಡಿಕೆ ಎಲೆಚುಕ್ಕೆ ರೋಗದಿಂದ ಕಂಗೆಟ್ಟಿದ್ದಾರೆ. ಆದರೆ ಇದಕ್ಕೆ ಯಾವುದೇ ವಿಶೇಷ ಅಥವಾ ಪ್ರತ್ಯೇಕ ಅನುದಾನ ಇಲ್ಲ. ಅಡಿಕೆಯ ಎಲೆ ಚುಕ್ಕಿ ರೋಗ, ಹಳದಿ ಎಲೆ ರೋಗ, ಹಾಗೂ ಕೋಳೆ ರೋಗಗಳ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ಎಂದಷ್ಟೇ ಹೇಳಲಾಗಿದೆ. ಅದೇ ರೀತಿ ತೆಂಗಿನ ಬೆಳೆಗೆ ಮಾರಕವಾಗಿರುವ ಕಪ್ಪು ತಲೆ ಹೂಳು ಮತ್ತು ಬಿಳಿ ನೊಣಗಳ ಹಾವಳಿಯನ್ನು ತಡೆಗಟ್ಟಲು ಎಲ್ಲವೂ ಸೇರಿ 10 ಕೋಟಿ ವೆಚ್ಚದ ಸಮುದಾಯ ಆಧಾರಿತ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ಆದರೆ ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದೇ ಅಥವಾ ಪ್ರತ್ಯೇಕ ಅನುದಾನ ಮೀಸಲಿಡುವುದು, ಅಥವಾ ಎಲೆಚುಕ್ಕೆ ರೋಗಕ್ಕೆ ಔಷಧ ಸಂಶೋಧನೆಗೆ ಅನುದಾನವಿಲ್ಲ. ಕೃಷಿ ವಲಯಕ್ಕೆ ಕೊಟ್ಟಂತೆ ತೋರಿಸಿ ಏನೂ ನೀಡಿಲ್ಲ ಎಂದು ಆರೋಪಿಸಿದ್ದಾರೆ.



