ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಾಲೆಗಳಲ್ಲಿ ಬಿಸಿಯೂಟ, ವಿದ್ಯಾರ್ಥಿ ನಿಲಯಗಳಲ್ಲಿ ಊಟದ ವ್ಯವಸ್ಥೆ ಹಾಗೂ ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳ ವಿತರಣೆಯ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿಗಳ ವಿರುದ್ದ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳ ಮೂಲಕ ಶಿಸ್ತುಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆ ಅಧ್ಯಕ್ಷತೆ ಅವರು ಮಾತನಾಡಿ, ಕಾರವಾರದ ಬಜಾರ್ ಶಾಲೆಯಲ್ಲಿ, ಶಾಲಾ ಮಕ್ಕಳಿಗೆ ಬಿಸಿಯೂಟ ವಿತರಣೆ ಮತ್ತು ಸ್ವಚ್ಛತೆ ಕಾಪಾಡುವ ಕಾರ್ಯದಲ್ಲಿನಿರ್ಲಕ್ಷ್ಯ ವಹಿಸಿದ ಶಿಕ್ಷಕರ ವಿರುದ್ದ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದು, ಈ ಕುರಿತಂತೆ ಅಧಿಕಾರಿಗಳು ಸಂಬಂದಪಟ್ಟ ಶಿಕ್ಷಕರಿಗೆ 15 ದಿನಗಳ ಕಡ್ಡಾಯ ರಜೆಯ ಶಿಕ್ಷೆ ನೀಡಿದ್ದು, ಅಮದಳ್ಳಿ ಡಾ. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡದ ಸಿಬ್ಬಂದಿಗೆ ಮತ್ತು ಕ್ರಿಮ್ಸ್ ನಲ್ಲಿ ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡುವ ಆಹಾರದ ಕುರಿತಂತೆ ನಿರ್ಲಕ್ಯ ತೋರಿದ ವೈದ್ಯರಿಗೆ ಸಂಬಂದಪಟ್ಟ ಹಿರಿಯ ಅಧಿಕಾರಿಗಳ ಮೂಲಕ ಕಾರಣ ಕೇಳಿ
ನೋಟಿಸ್ ಜಾರಿಗೊಳಿಸಲಾಗಿದೆ ಎಂದರು.
ಜಿಲ್ಲೆಯ ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಊಟದ ವ್ಯವಸ್ಥೆ , ಸಾರ್ವಜನಿಕ ಪಡಿತರ ಆಹಾರ ವಿತರಣೆ, ಶಾಲೆಗಳಲ್ಲಿ ಬಿಸಿಯೂಟ, ಅಂಗನವಾಡಿಗಳಲ್ಲಿ ಆಹಾರ ನೀಡಿಕೆ, ವಿದ್ಯ್ಯಾರ್ಥಿ ನಿಲಯಗಳಲ್ಲಿ ಆಹಾರ ವಿತರಣೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡುವ ಪೌಷ್ಠಿಕ ಆಹಾರ, ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡುವ ಆಹಾರ, ಆಹಾರ ಪದಾರ್ಥಗಳ ದಾಸ್ತಾನು ಸೇರಿದಂತೆ ಆಹಾರ ವಿತರಣಾ ವ್ಯವಸ್ಥೆಯ ಪ್ರಕ್ರಿಯೆಗಳಲ್ಲಿ ಯಾವುದೇ ಲೋಪಗಳು ಕಂಡುಬಾರದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದರು.
ಕರ್ನಾಟಕ ರಾಜ್ಯ ಆಹಾರ ಆಯೋಗದ ವತಿಯಿಂದ 3 ದಿನಗಳ ಕಾಲ ಜಿಲ್ಲೆಯಲ್ಲಿ , ಪಡಿತರ ದಾಸ್ತಾನು ಕೇಂದ್ರಗಳು, ಶಾಲೆ ಮತ್ತು ಅಂಗನವಾಡಿಗಳು, ಹಾಸ್ಟೆಲ್‌ಗಳು, ಆಸ್ಪತ್ರೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಭೇಟಿ ಸಂದರ್ಭದಲ್ಲಿ ಕಂಡುಬರುವ ನ್ಯೂನತೆಗಳ ಕುರಿತಂತೆ ವರದಿಯನ್ನು ಸಿದ್ದಪಡಿಸಿದ್ದು, ಈ ವರದಿಯಲ್ಲಿನ ಲೋಪಗಳನ್ನು ಅಧಿಕಾರಿಗಳು ಸರಿಪಡಿಸುವ ಕಾರ್ಯ ಮಾಡುವ ಮೂಲಕ ಪ್ರತಿಯೊಬ್ಬರಿಗೂ ಆಹಾರದ ಹಕ್ಕಿನ ಸಂಪೂರ್ಣ ಪ್ರಯೋಜನ ದೊರೆಯುವಂತೆ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರು ಮಾತನಾಡಿ, ರಾಜ್ಯ ಆಹಾರ ಆಯೋಗದ ವತಿಯಿಂದ ನಡೆಸಿರುವ ಪರಿಶೀಲನಾ ವೇಳೆಯಲ್ಲಿ ಕಂಡು ಬಂದಿರುವ ಲೋಪಗಳನ್ನು ಆದ್ಯತೆಯಲ್ಲಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ಎಲ್ಲಾ ಲೋಪಗಳ ಕುರಿತಂತೆ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ,ಸುಮಂತ್‌ರಾವ್, ಮಾರುತಿ ಎಂ. ದೊಡ್ಡಲಿಂಗಣ್ಣನವರ, ಎ. ರೋಹಿಣಿ ಪ್ರಿಯ, ಕೆ.ಎಸ್.ವಿಜಯಲಕ್ಷ್ಮಿ, ಆಹಾರ ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣ್‌ಕರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.



