ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಎರಡು ಕಾಮಗಾರಿಗಳಿಗೆ ಬಿಜೆಪಿ ಸರಕಾರದ ವೇಳೆಯಲ್ಲಿ ಅನುದಾನ ಬಿಡುಗಡೆ ಆಗಿದ್ದು, ಈಗ ಈ ಕಾಮಗಾರಿಗಳನ್ನು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮಂಜೂರಿ ಮಾಡಲಾಗಿದೆ ಎಂದು ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಸಚಿವ ದಿನೇಶ್ ಗುಂಡೂರಾವ್ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ರಾಜಕೀಯ ಗಿಮಿಕ್ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಪಾಲಿಕೆ ಬಿಜೆಪಿ ಆಡಳಿತ ಅವಧಿಯಲ್ಲಿ ನಗರದ ಕೊಡಿಯಾಲ್‌ಗುತ್ತು ವೆಟ್‌ವೆಲ್‌ನಿಂದ ಕುದ್ರೋಳಿ ವೆಟ್‌ವೆಲ್ ಗೆ ಸಂಪರ್ಕ ಕಲ್ಪಿಸುವ ಪಂಪಿಂಗ್ ಕೊಳವೆಯನ್ನು ಕೊಡಿಯಾಲ್‌ಗುತ್ತಿನಿಂದ ಹಾಲ್‌ಮಾರ್ಕ್ ಅಪಾರ್ಟ್‌ಮೆಂಟ್‌ವರೆಗೆ ಬದಲಾಯಿಸಲು ರೂಪಾಯಿ 3.42 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಈಗ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ನಾನೇ ಅದನ್ನು ಮಂಜೂರಿ ಮಾಡಿಸಿದ್ದು ಎಂದು ತಪ್ಪು ಮಾಹಿತಿ ನೀಡಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸ್ಥಳ ಪರಿಶೀಲನೆ ಕರೆದುಕೊಂಡು ಹೋಗುತ್ತಿರುವುದು ಎಷ್ಟು ಸರಿ ಎಂದು ಆಕ್ರೋಶ ಹೊರಹಾಕಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಂ.ಜಿ. ರಸ್ತೆಯ ಬಲ್ಲಾಳ್‌ಬಾಗ್ ಸೇತುವೆ ಅಭಿವೃದ್ಧಿಗೆ 2 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿತ್ತು. ಇದು ಕೂಡ ಪಾಲಿಕೆ ಬಿಜೆಪಿ ಆಡಳಿತದ ಅವಧಿಯಲ್ಲೇ ಮಂಜೂರಿ ಆಗಿದ್ದು, ಆದರೆ ಇಲ್ಲಿ ಸೇತುವೆಯ ಅಗತ್ಯವೇ ಇಲ್ಲ ಎಂದು ದಿಢೀರ್ ತೀರ್ಮಾನಿಸಿ ಅನುದಾನವನ್ನುಪಡೀಲು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಪೂರ್ಣಗೊಳಿಸಲು ವರ್ಗಾವಣೆ ಮಾಡಿಕೊಂಡರು. ಆದರೆ ಮತ್ತೇ ಬಿಜೆಪಿ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಸಭೆ ಮಾಡಿ ಅದಕ್ಕೆ ಬೇರೆ ವ್ಯವಸ್ಥೆ ಮಾಡುವುದಕ್ಕೆ ಮುಂದಾದೇವು ಎಂದರು.

ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಜಿಲ್ಲೆಯ ಶಾಸಕರನ್ನು ಕರೆದು ಸಭೆ ಮಾಡಿ ಸಮಸ್ಯೆಗಳನ್ನು ಆಲಿಸಲು ಸಮಯವಿಲ್ಲ. ಆದರೆ, ಕಾಂಗ್ರೆಸ್ ರಾಜಕೀಯ ಕಾರ್ಯಕ್ರಮ ಇದ್ದರೆ ಬಿಡುವು ಮಾಡಿಕೊಂಡು ಬರುತ್ತಾರೆ. ಹಾಗಾಗಿ ಅವರೊಬ್ಬ ಗೆಸ್ಟ್ ಉಸ್ತುವಾರಿ ಸಚಿವರು ಎಂದು ಕುಟುಕಿದರು.
ಮಂಗಳೂರು ನಗರ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ಇಲ್ಲದೇ ಇದ್ದರೂ ನನ್ನ ಪ್ರಯತ್ನದಿಂದ ಅನುದಾನ ಬಿಡುಗಡೆ ಮಾಡಿಕೊಂಡು ಬಂದಿದ್ದೇನೆ. ಬೊಮ್ಮಾಯಿ ಅವರು ಮುಖ್ಯಮಂತ್ರಿ ಇದ್ದಾಗ 128 ಕೋಟಿ ಅಷ್ಟು ಅನುದಾನ ತಂದಿದೆ. ಇನ್ನು ಬಾಕಿ ಉಳಿದ 24 ಕೋಟಿಯನ್ನು ಸಚಿವ ಸತೀಶ್ ಜಾರಕಿಹೊಳಿ ಬಿಡುಗಡೆಗೊಳಿಸಿದ್ದರು, ಅವರಿಗೆ ನಾನು ಧನ್ಯವಾದ ತಿಳಿಸುವೆ. ಹಿಂದಿನ ಬಿಜೆಪಿ ಸರಕಾರ ಅನುಮೋದಿಸಿದ ಕಾಮಗಾರಿ ಹೊರತು ಪಡಿಸಿದರೆ ಕಾಂಗ್ರೆಸ್ ಸರಕಾರ ಯಾವುದೇ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಲ್ಲ, ನಾನು ಶಿಲಾನ್ಯಾಸ ಮಾಡುವ ಕಾಮಗಾರಿಗಳ ಬಗ್ಗೆ ಧ್ವನಿ ಎತ್ತಿರುವ ಐವನ್ ಡಿಸೋಜ ಅವರು ಮೊದಲು ಸತ್ಯವನ್ನು ತಿಳಿದು ಮಾತನಾಡಲಿ. ಪ್ರತಿಯೊಬ್ಬ ಶಾಸಕರಿಗೆ ಯಾವುದೇ ಸರಕಾರ ಇದ್ದಾಗಲೂ ಕೂಡ ಶಾಸಕರ ಅನುದಾನ ಬರುತ್ತೆ. ಇದು ಅವರಿಗೆ ತಿಳಿದಿಲ್ಲ ಎಂದು ಕಾಣುತ್ತೇ ಎಂದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆ ಹಾಗೂ ಪೊಲೀಸ್ ಇಲಾಖೆಗೆ ಯಾವುದೇ ಮಾಹಿತಿ ನೀಡದೇ ಕಂಡ ಕಂಡಲ್ಲಿ ಪೊಲೀಸ್ ಚೌಕಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಯಾವುದೋ ಗುತ್ತಿಗೆದಾರನಿಗೆ ಟೆಂಡರ್ ನೀಡಿ, ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ. ಸೌಜನ್ಯಕ್ಕಾದರೂ ಸ್ಥಳೀಯ ಶಾಸಕರನ್ನು ಒಮ್ಮೆ ಕೇಳಬೇಕಿತ್ತು. ಇನ್ನು ಪಾಲಿಕೆ ವ್ಯಾಪ್ತಿಯ ಹೋಲ್ಡಿಂಗ್ಸ್ ಪರವಾನಗಿಯನ್ನು ಸ್ಥಳೀಯರಿಗೆ ರದ್ದು ಮಾಡಿ, ತಮಿಳುನಾಡಿನ ಗುತ್ತಿಗೆದಾರರೊಬ್ಬರಿಗೆ ನೀಡಲು ಮುಂದಾಗಿದ್ದಾರೆ. ಇನ್ನು ಮುಂದೇ ಜಾಹೀರಾತು ಫಲ ಹಾಕುವುದಕ್ಕೆ ಗುತ್ತಿಗೆದಾರ ಕೇಳಿದಷ್ಟು ದುಡ್ಡು ನೀಡಬೇಕಾದ ಸ್ಥಿತಿ ಮಂಗಳೂರಿನ ಜನಕ್ಕೆ ಬರಲಿದೆ. ಸ್ಥಳೀಯರು ಇದನ್ನು ವಿರೋಧಿಸಿ ಕೋರ್ಟ್ ಗೆ ಹೋಗಿದ್ದಾರೆ. ಆದರೆ ಅವರಿಗೆ ಧಮ್ಕಿ ಹಾಕಿ ಕೇಸ್ ವಾಪಸ್ ಪಡೆಯುವಂತೆ ಒತ್ತಡ ಹಾಕುವ ಕೆಲಸ ಕಾರ್ಯಗಳು ನಡೆಯುತ್ತಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ದಿವಾಕರ್ ಪಾಂಡೇಶ್ವರ, ಮಾಜಿ ಉಪ ಮೇಯರ್ ಶಕೀಲಾ ಕಾವ, ಬಿಜೆಪಿ ಮುಖಂಡರಾದ ಮನೋಹರ್ ಕದ್ರಿ, ಮೋಹನ ಪೂಜಾರಿ, ಅಶ್ವಿತ್ ಕೊಟ್ಟಾರಿ, ಪ್ರವೀಣ್ ನಿಡ್ಡೋಡಿ, ಲಲ್ಲೇಶ್ ಇದ್ದರು.



