ಆಹಾರ ಭದ್ರ‍ತೆ ಕುರಿತ ಸಾರ್ವಜನಿಕ ದೂರಿಗೆ ತ್ವರಿತ ಸ್ಪಂದನೆ : ಡಾ. ಎಚ್.ಕೃಷ್ಣ 

 

 

ಕಾರವಾರ: ಆಹಾರ ಭದ್ರತಾ ಕಾಯ್ದೆ ಅಡಿ ಆಹಾರ ಪದಾರ್ಥಗಳ ವಿತರಣೆಯಲ್ಲಿ ಕಂಡು ಬರುವ ಸಾರ್ವಜನಿಕರ ದೂರುಗಳಿಗೆ ಸಂಬಂಧಿಸಿದಂತೆ ರಾಜ್ಯ ಆಹಾರ ಆಯೋಗದ ಮೂಲಕ ಪರಿಶೀಲಿಸಿ, ತ್ವರಿತವಾಗಿ ಅಗತ್ಯ ಪರಿಹಾರವನ್ನು ಒದಗಿಸಲಾಗುವುದು ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕ ಪಡಿತರ ಆಹಾರ ವಿತರಣೆ, ಶಾಲೆಗಳಲ್ಲಿ ಬಿಸಿಯೂಟ, ಅಂಗನವಾಡಿಗಳಲ್ಲಿ ಆಹಾರ ನೀಡಿಕೆ, ವಿದ್ಯ್ಯಾರ್ಥಿ ನಿಲಯಗಳಲ್ಲಿ ಆಹಾರ ವಿತರಣೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡುವ ಪೌಷ್ಠಿಕ ಆಹಾರ, ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡುವ ಆಹಾರ, ಆಹಾರ ಪದಾರ್ಥಗಳ ದಾಸ್ತಾನು ಸೇರಿದಂತೆ ಆಹಾರ ವಿತರಣಾ ವ್ಯವಸ್ಥೆಯ ಪ್ರತಿಯೊಂದು ವಿಭಾಗಳಲ್ಲೂ ಕೂಡಾ ಅಗತ್ಯ ನಿಯಮಗಳನ್ನು ಪಾಲನೆ ಮಾಡುತ್ತಿರುವ ಕುರಿತಂತೆ ರಾಜ್ಯ ಆಹಾರ ನಿಗಮವು ಪರಿಶೀಲಿಸಿ ಈ ಬಗ್ಗೆ ವರದಿಯನ್ನು ಸರಕಾರಕ್ಕೆ ನೀಡಲಿದ್ದು, ಭೇಟಿಯ ಸಂದರ್ಭದಲ್ಲಿ ಕಂಡು ಬರುವ ಕುಂದು ಕೊರತೆಗಳನ್ನು ಬಗೆಹರಿಸುವ ಕಾರ್ಯವನ್ನೂ ಕೂಡ ಮಾಡುತ್ತಿದೆ ಎಂದರು.

ಸರಕಾರದಿಂದ ಬಿಡುಗಡೆ ಆಗುವ ಆಹಾರ ಪದಾರ್ಥಗಳ ದಾಸ್ತಾನು, ಗುಣಮಟ್ಟ ಮತ್ತು ಸರಬರಾಜಿನ ಕುರಿತು ಕೂಡ ಆಯೋಗ ಪರಿಶೀಲನೆ ನಡೆಸುತ್ತಿದ್ದು, ಸಾರ್ವಜನಿಕರಿಗೆ ಸರಕಾರದಿಂದ ಸಿಗುವ ಆಹಾರ ಸೌಲಭ್ಯ್ಯಗಳನ್ನು ವ್ಯವಸ್ಥಿತ ರೀತಿಯಲ್ಲಿ ತಲುಪಿಸುವ ಮತ್ತು ಆಹಾರ ಪದಾರ್ಥಗಳಲ್ಲಿ ಕಲಬೆರಕೆಯನ್ನು ತಡೆಯುವ ಕಾರ್ಯವನ್ನು ಮಾಡುತ್ತಿದೆ ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪಡಿತರ ದಾಸ್ತಾನು ಕೇಂದ್ರಗಳು, ಶಾಲೆ ಮತ್ತು ಅಂಗನವಾಡಿಗಳು, ಹಾಸ್ಟೆಲ್‌ಗಳು, ಆಸ್ಪತ್ರೆಗಳಿಗೆ ಆಯೋಗವು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದು, ಭೇಟಿ ಸಂದರ್ಭದಲ್ಲಿ ಕಂಡುಬರುವ ನ್ಯೂನತೆಗಳ ಕುರಿತಂತೆ ವರದಿಯನ್ನು ಸಲ್ಲಿಸಿ, ಲೋಪಗಳನ್ನು ಸರಿಪಡಿಸುವ ಕಾರ್ಯ ಮಾಡಲಾಗುವುದು ಎಂದರು.

ಜಿಲ್ಲೆಯ ಸಾರ್ವಜನಿಕರು ಪಡಿತರ ವಿತರಣೆ ಸೇರಿದಂತೆ ಆಹಾರ ವ್ಯವ್ಥೆಯಲ್ಲಿನ ಯಾವುದೇ ರೀತಿಯ ದೂರುಗಳಿದ್ದಲ್ಲಿ, ನೇರವಾಗಿ ಸಂಪರ್ಕಿಸಿ ಆಯೋಗಕ್ಕೆ ಸಲ್ಲಿಸುವಂತೆ ಅಧ್ಯಕ್ಷರು ತಿಳಿಸಿದರು.

ಆಯೋಗದ ಸದಸ್ಯರಾದ ಸುಮಂತ್‌ರಾವ್, ಮಾರುತಿ ಎಂ ದೊಡ್ಡಲಿಂಗಣ್ಣನವರ, ಎ. ರೋಹಿಣಿ ಪ್ರಿಯ, ಕೆ.ಎಸ್.ವಿಜಯಲಕ್ಷ್ಮಿ, ಆಹಾರ ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣ್‌ಕರ್, ತಹಶೀಲ್ದಾರ್ ನಿಶ್ಚಲ್ ನರೋನ್ಹ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

  1.  

Leave a Reply

Your email address will not be published. Required fields are marked *