ಅರೇಬಿಯನ್ ಸಮುದ್ರ ತೀರದಲ್ಲಿ ಯುದ್ಧದ ಉದ್ವಿಗ್ನತೆ: ತೈಲ ಟ್ಯಾಂಕರ್ ಮೇಲೆ ದಾಳಿ

ಮಸ್ಕತ್: ಅರೇಬಿಯನ್ ಸಮುದ್ರ ತೀರದಲ್ಲಿ ಯುದ್ಧದ ಉದ್ವಿಗ್ನತೆ ಹೆಚ್ಚುತ್ತಿರುವ ವೇಳೆ ಒಮಾನ್ ಕರಾವಳಿ ಸಮೀಪ ಪಲಾವ್ ಧ್ವಜ ಹೊತ್ತ ಸ್ಕೈಲೈಟ್ ತೈಲ ಟ್ಯಾಂಕರ್ ಮೇಲೆ ದಾಳಿ ನಡೆದಿದೆ. ಮುಸಂಡಮ್ ಪ್ರದೇಶದಿಂದ ಐದು ನಾಟಿಕಲ್ ಮೈಲು ದೂರದಲ್ಲಿ ಈ ಘಟನೆ ಸಂಭವಿಸಿದೆ ಎಂದು ಒಮಾನ್ ಕಡಲ ಭದ್ರತಾ ಕೇಂದ್ರ ತಿಳಿಸಿದೆ ಎಂದು ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ದಾಳಿಯಲ್ಲಿ ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಟ್ಟು 20 ಮಂದಿ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಗಾಯಾಳುಗಳಿಗೆ ತಕ್ಷಣವೇ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಡಗಿನ ಹಾನಿ ಪ್ರಮಾಣ ಮತ್ತು ದಾಳಿಯ ಸ್ವರೂಪದ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

ಇದಕ್ಕೂ ಮೊದಲು, ಓಮಾನ್ ದೇಶದ ಸರಕಾರಿ ಮಾಧ್ಯಮ ಎರಡು ಡ್ರೋನ್ ಗಳು ಡುಕ್ಮ್ ಪೋರ್ಟ್ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾಗಿ ವರದಿ ಮಾಡಿತ್ತು. ಈ ದಾಳಿಯಲ್ಲಿ ಒಬ್ಬ ವಿದೇಶಿ ಕಾರ್ಮಿಕ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಓಮಾನ್‌ ಕರಾವಳಿ ಪ್ರದೇಶದಲ್ಲಿ ಸಮುದ್ರ ಭದ್ರತೆ ಕಠಿಣಗೊಳಿಸಲಾಗಿದ್ದು, ಸಾಗರ ಮಾರ್ಗಗಳ ಮೇಲೆ ನಿಗಾ ಹೆಚ್ಚಿಸಲಾಗಿದೆ. ಎರಡೂ ಘಟನೆಗಳ ಕುರಿತಾಗಿ ತನಿಖೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *