ಹಾವೇರಿ: ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು, 15 ದಿನಗಳ ಹಿಂದೇ ದಾಂಪತ್ಯಕ್ಕೆ ಕಾಲಿಟ್ಟಿದ್ದ ಜೋಡಿಗಳು ಮೃತಪಟ್ಟಿರುವ ಘಟನೆ ಶಿಗ್ಗಾವಿ ತಾಲೂಕು ಕಡಹಳ್ಳಿ ಬಳಿ ಸಂಭವಿಸಿದೆ.
ಹಾವೇರಿ ಕಾರ್ತಿಕ್ ಹೂಗಾರ್ (33), ಪತ್ನಿ ಐಶ್ವರ್ಯ ಹೂಗಾರ್ (26) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಕಡೆಯಿಂದ ಶಿಗ್ಗಾವಿ ಕಡೆಗೆ ಬರುತ್ತಿದ್ದ ಕಾರು ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ. ಕಾರಿನಲ್ಲಿದ್ದ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಫೆ. 13 ರಂದು ಮದುವೆ ಆಗಿದ್ದ ಜೋಡಿ ನವಲಗುಂದ ಕಾಮಣ್ಣನಿಗೆ ಪೂಜೆ ಸಲ್ಲಿಸಿ ಮರಳಿ ಹಾವೇರಿ ಕಡೆಗೆ ಬರುವಾಗ ಘಟನೆ ನಡೆದಿದೆ. ತಡಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



