ಔಷಧವೇ ಇಲ್ಲದೇ ರೋಗಿಗಳಿಗೆ ಚಿಕಿತ್ಸೆ ನೀಡೋದು ಹೇಗೆ, ವೈದ್ಯರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ: ಡಾ. ದೀಪಕ್ ರೈ

ಮಂಗಳೂರು: ರಾಜ್ಯ ಸರಕಾರಿ ವೈದ್ಯರು ಸರಕಾರಕ್ಕೆ ಸಲ್ಲಿಸಿರುವ ಬೇಡಿಕೆಗಳನ್ನು ಮಾರ್ಚ್ 10 ರೊಳಗೆ ಈಡೇರಿಸದೇ ಇದ್ದಲ್ಲಿ ಮಾರ್ಚ್ 11 ರಿಂದ 15 ರವರೆಗೆ ಕಪ್ಪು ಪಟ್ಟಿ ಧರಿಸಿ ತುರ್ತು ಸೇವೆ ಮಾತ್ರ ಸರಕಾರಿ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು. ಮಾರ್ಚ್ 16 ರಿಂದ ಸಂಪೂರ್ಣ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸರಕಾರಿ ವೈದ್ಯಾಧಿಕಾರಿಗಳ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಡಾ. ದೀಪಕ್ ರೈ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಸರಕಾರಕ್ಕೆ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿ 8 ತಿಂಗಳು ಆಗಿದೆ. ಆದರೆ ಯಾವುದೇ ಒಂದು ಬೇಡಿಕೆ ಕೂಡ ಈಡೇರಿಸಿಲ್ಲ. ಹಾಗಾಗಿ ಸರಕಾರಕ್ಕೆ ಚುರುಕು ಮುಟ್ಟಿಸುವ ಉದ್ದೇಶದಿಂದ ಪ್ರತಿಭಟನೆಯ ಹಾದಿ ಹಿಡಿಯುತ್ತಿದ್ದೇವೆ. ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಔಷಧ ಸರಬರಾಜು ಮಾಡಲು ಸಾಧ್ಯವಾಗದ ಇಲಾಖೆಯಿಂದ ಯಾವ ರೀತಿಯಲ್ಲಿ ಆರೋಗ್ಯ ಸೇವೆ ನೀಡಲು ಸಾಧ್ಯ ಆಗುತ್ತದೆ. ಕೇಂದ್ರ ಪುರಸ್ಕೃತ ಯೋಜನೆ ಅಡಿ ದುಡಿವ 6,000 ನೌಕರರಿಗೆ 4 ತಿಂಗಳಿಗೊಮ್ಮೆ ಸಂಬಳ ನೀಡುವ ಧೋರಣೆ ಖಂಡನೀಯ ಎಂದರು.

ಇಲಾಖೆಯ ವರ್ಗಾವಣೆಯ ಕಾಯ್ದೆಯ ನ್ಯೂನತೆಗಳನ್ನು ಸರಿಪಡಿಸದೆ ಅವೈಜ್ಞಾನಿಕ ಕೌನ್ಸೆಲಿಂಗ್ ವರ್ಗಾವಣೆ ಮಾಡಲಾಗುತ್ತಿದೆ. ವರ್ಷದಲ್ಲಿ ಒಂದ ಬಾರಿ ಸಾಮಾನ್ಯ ವರ್ಗಾವಣೆ ನಡೆಸಬೇಕು. ಬೇರೆ ಅವಧಿಯಲ್ಲಿ ವರ್ಗಾವಣೆ ನಡೆಸಿದರೆ, ಅದು ಕುಟುಂಬದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಸರಕಾರ ಅವಕಾಶ ನೀಡಬಾರದು. ಇದು ಪ್ರಮಖ ಬೇಡಿಕೆಗಳಲ್ಲಿ ಒಂದಾಗಿದೆ ಎಂದರು.

ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಿಗೆ ಕಾಲ ಕಾಲಕ್ಕೆ ಇಲಾಖೆಯಿಂದ ಔಷಧಿ ಸರಬರಾಜು ಮಾಡಬೇಕು. ವೃಂದ ಮತ್ತು ನೇಮಕಾತಿ ನಿಯಮವನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ತಿದ್ದುಪಡಿ ಮಾಡಲು ಸರಕಾರಿ ಆದೇಶ ಇದ್ದರೂ 1973 ರಿಂದ ಈವರೆಗೆ ತಿದ್ದುಪಡಿ ಮಾಡಿಲ್ಲ. ಈ ಬಗ್ಗೆ ಕ್ರಮ ವಹಿಸಬೇಕು. ಇಲಾಖೆಯ ಎಲ್ಲ ವೃಂದಗಳ ಜೇಷ್ಠತಾ ಪಟ್ಟಿಯನ್ನು ಕಾಲಕಾಲಕ್ಕೆ ಪ್ರಕಟಿಸಬೇಕು. ಐದು ವರ್ಷಗಳಿಂದ ಮುಂಬಡ್ತಿ ನೀಡಲಾಗಿಲ್ಲ. ಅದಕ್ಕೆ ಕ್ರಮ ವಹಿಸಬೇಕು ಎಂದರು.

ನಿಯಮದಲ್ಲಿ ಇರುವಂತೆ ಸೇವಾ ನಿರತ ವೈದ್ಯರು, ಅಧಿಕಾರಿ ನೌಕರರ ಉನ್ನತ ವ್ಯಾಸಂಗ, ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ ನೀಡಬೇಕು. ವೈದ್ಯಕೀಯ ಶಿಕ್ಷಣ ಇಲಾಖೆಯ ಸ್ವಾಯತ್ತ ಸಂಸ್ಥೆಗಳಲ್ಲಿ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಮಹಾನಗರ ಪಾಲಿಕೆ ಹಾಗೂ ನಗರ ಪಾಲಿಕೆಗಳಲ್ಲಿ ಮಂಜೂರಾಗಿರುವ ಆರೋಗ್ಯ ಇಲಾಖೆಯ ಎನ್ ಕೇಡರ್ ಹುದ್ದೆಗಳಿಗೆ ನೇಮಕಾತಿ, ಮುಂಬಡ್ತಿ ಮತ್ತು ವರ್ಗಾವಣೆಗಳಿಗೆ ಆರೋಗ್ಯ ಇಲಾಖೆಯ ವೈದ್ಯರು, ಅಧಕಾರಿ- ನೌಕರರನ್ನೇ ನಿಯೋಜನೆ ಮಾಡಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ದೃಷ್ಟಿಯಿಂದ ಇಲಾಖೆಯಲ್ಲಿ ಖಾಲಿ ಇರುವ ವೈದ್ಯರು, ಅರೆ ವೈದ್ಯಕೀಯ ಹಾಗೂ ಇತರ ವೃಂದದ ಹುದ್ದೆಳನ್ನು ಭರ್ತಿ ಮಾಡುವುದು. ಕೇಂದ್ರ ಪುರಸ್ಕೃತ ಯೋಜನೆ ಅಡಿ ಕಾರ್ಯನಿರತ ಅಧಿಕಾರಿ ನೌಕರರಿಗೆ ಮೂರ್ನಾಲ್ಕು ತಿಂಗಳಿಗೊಮ್ಮೆ ವೇತನ ಭತ್ತೆ ನೀಡಲಾಗುತ್ತಿದ್ದು, ಇದನ್ನು ಪ್ರತಿ ತಿಂಗಳ ಮೊದಲ ವಾರ ಒದಗಿಸಬೇಕು. ವೈದ್ಯರು, ತಜ್ಞ ವೈದ್ಯರು, ಇತರ ಸಿಬ್ಬಂದಿಗೆ ಸಿ.ಜಿ.ಎಚ್.ಎಸ್ ಅಥವಾ ಎ.ಐ.ಸಿ.ಟಿ.ಇ. ಮಾದರಿ ವೇತನ ನೀಡುವುದು. ಸರಕಾರಿ ವೈದ್ಯರ ಕರ್ತವ್ಯದ ಅವಧಿಯ ನಂತರ ಖಾಸಗಿ ಸೇವೆಗೆ ಅವಕಾಶ ನೀಡಬೇಕು ಎಂದರು.
ಸರಕಾರ ಈ ಎಲ್ಲ ಬೇಡಿಕೆಗಳನ್ನು ಮಾರ್ಚ್ 10ರೊಳಗೆ ಈಡೇರಿಸಬೇಕು. ವೈದ್ಯರ ಸಂಘದ ಹೋರಾಟಕ್ಕೆ ಸರಕಾರಿ ಆರೋಗ್ಯ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ, ವೈದ್ಯಕೀಯ ಶಿಕ್ಷಣ ಇಲಾಖೆಯ ನೌಕರರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.

ಸಂಘದ ಕಾರ್ಯದರ್ಶಿ ಡಾ. ಅಕ್ಷತಾ, ಉಪಾಧ್ಯಕ್ಷ ಡಾ. ಶರತ್‌ ಬಾಬು ಹಾಗೂ ಡಾ. ರಾಜೇಶ್‌, ಖಜಾಂಜಿ ಡಾ. ತುಫೈಲ್‌, ಆರೋಗ್ಯ ಇಲಾಖೆಯ ದಕ್ಷಿಣ ಕನ್ನಡ ಶಾಖೆಯ ಅಧ್ಯಕ್ಷೆ ಮಹಾಲಕ್ಷ್ಮಿ, ಕಾರ್ಯದರ್ಶಿ ಯೋಗೇಶ್ ಸೇರಿದಂತೆ ಹಲವರು ಇದ್ದರು.

  1.  

Leave a Reply

Your email address will not be published. Required fields are marked *