
ಮಂಗಳೂರು: ಸಹಕಾರಿ ಕ್ಷೇತ್ರ ಹಾಗೂ ತುಳುನಾಡಿನ ಬ್ಯಾಂಕ್ ಈ ಮಟ್ಟದಲ್ಲಿ ಗಟ್ಟಿಯಾಗಿ ಬೆಳೆಯುವುದಕ್ಕೆ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಪರಿಶ್ರಮ ಕಾರಣ ಆಗಿದ್ದು, ದೇಶದಲ್ಲಿ ಜಿಲ್ಲೆಯ ಸಹಕಾರಿ ಕ್ಷೇತ್ರವನ್ನು ತಿರುಗಿ ನೋಡುವಂತೆ ಮಾಡಿರುವುದು ಹೆಮ್ಮೆಯ ಸಂಗತಿಯೇ ಸರಿ ಎಂದು ವಿಧಾನಸಭೆಯ ಸ್ಪೀಕರ್ ಯು. ಟಿ. ಖಾದರ್ ಹೇಳಿದರು.
ಸಹಕಾರಿ ರತ್ನಹಾಗೂ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರ 77ನೇ ಜನ್ಮದಿನದ ಅಭಿವಂದನಾ ಸಮಾರಂಭವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
77ನೇ ಜನ್ಮದಿನವನ್ನು ಆಚರಣೆ ಮಾಡಿಕೊಳ್ಳುತ್ತಿರುವ ಡಾ. ರಾಜೇಂದ್ರ ಕುಮಾರ್ ಅವರು ಶತಾಯುಷಿ ಆಗಲಿ. ಜೀವನದಲ್ಲಿ ಸಾರ್ಥಕತೆ ಕಾಣಬೇಕಾದರೆ ಜನರು ನಮ್ಮನ್ನು ಪ್ರೀತಿಯಿಂದ ಕಾಣಬೇಕು. ಹಣ, ಸಂಪತ್ತು, ಅಧಿಕಾರ ಎಂದಿಗೂ ಶಾಶ್ವತವಲ್ಲ. ಡಾ. ರಾಜೇಂದ್ರ ಕುಮಾರ್ ಅವರ ಜನ್ಮದಿನಕ್ಕೆ ಹರಿದು ಬಂದಿರುವ ಜನಸ್ತೋಮವೇ ಎಲ್ಲದಕ್ಕೂ ಸಾಕ್ಷಿ ಆಗಿದೆ ಎಂದರು.
ಅಭಿವಂದನಾ ಭಾಷಣ ಮಾಡಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು, ಸಹಕಾರಿ ರಂಗದ ಸ್ಥಾನಕ್ಕೆ ಡಾ. ರಾಜೇಂದ್ರ ಕುಮಾರ್ ನ್ಯಾಯ ಒದಗಿಸಿ ದಾಖಲೆ ನಿರ್ಮಿಸಿದ್ದಾರೆ. ಜತೆಗೆ ಸಾಕಷ್ಟು ಪ್ರತಿಭಾವಂತರನ್ನು ಸಹಕಾರಿ ಕ್ಷೇತ್ರದಲ್ಲಿ ಬೆಳೆಸಿದ್ದಾರೆ. ಸರ್ವರಿಗೆ ಸಮಬಾಳು ಸರ್ವರಿಗೂ ಸಮಪಾಲು ಎಂಬ ಧ್ಯೇಯದ ಆಧಾರದಲ್ಲಿ ಅವಿಭಜಿತ ಜಿಲ್ಲೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದರು.

45 ವರ್ಷಗಳ ಸಹಕಾರ ರಂಗದಲ್ಲಿ ದೇಶದ ಬ್ಯಾಂಕ್ ಕ್ಷೇತ್ರದಲ್ಲಿ ಧ್ರುವ ತಾರೆಯಂತೆ ಕಂಗೊಳಿಸುತ್ತಿದ್ದಾರೆ. ಸಹಕಾರಿ ರಂಗದ ಮೂಲಕ ಸಾಮಾಜಿಕ ನ್ಯಾಯಕ್ಕೆ ಕೊಡುಗೆ ನೀಡಿದ್ದಾರೆ. ಕಾರ್ಕಳ ತಾಲ್ಲೂಕಿನ ನೇಮಿರಾಜ್ ಹೆಗ್ಡೆ ಅವರ ಪುತ್ರ ರಾಜೇಂದ್ರ ಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವಾಗ ಸಣ್ಣ ಅಳುಕು ಇತ್ತು. ಆದರೆ ಅದು ಇಂದು ನಿವಾರಣೆ ಆಗಿದೆ. ಕರಾವಳಿಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ತಮ್ಮದೇ ಬಲವಾದ ಹಿಡಿತ ಹೊಂದುವ ಮೂಲಕ ಸಾಧನೆ ಮಾಡಿದ್ದು ಖುಷಿ ತಂದಿದೆ ಎಂದರು.
64 ಕೋಟಿ ರೂಪಾಯಿ ಠೇವಣಿಯಿದ್ದ ಎಸ್ ಸಿಡಿಸಿಸಿ ಬ್ಯಾಂಕ್, ಈಗ 7,000 ಕೋಟಿ ರೂಪಾಯಿಗೂ ಅಧಿಕ ಠೇವಣಿ ಸಂಗ್ರಹ ಮಾಡಲು ಸಾಧ್ಯ ಆಗಿದೆ. 25 ಶಾಖೆಗಳಿಂದ 113 ಶಾಖೆಗಳಿಗೆ ಏರಿಕೆ ಆಗಿದೆ. ಸಹಕಾರಿ ರಂಗದ ಬೆಳವಣಿಗೆಗೆ ಅವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು.

ಅಭಿನಂದನೆ ಸ್ವೀಕರಿಸಿದ ಡಾ. ಎಂ.ಎನ್ . ರಾಜೇಂದ್ರ ಕುಮಾರ್ ಮಾತನಾಡಿ, ದೇಶದ 459 ಜಿಲ್ಲಾ ಸಹಕಾರಿ ಬ್ಯಾಂಕ್ ಗಳ ಪೈಕಿ ಎಸ್ ಸಿಡಿಸಿಸಿ ಬ್ಯಾಂಕ್ ಸಾಲು ನೀಡುವಲ್ಲಿ ಪ್ರಥಮ ಸ್ಥಾನದಲ್ಲಿ ಇದೆ ಎನ್ನುವ ಬಗ್ಗೆ ನಬಾರ್ಡ್ ನೀಡಿದ ಗೌರವ ತನಗೆ ತೃಪ್ತಿ ನೀಡಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಕೋವಿಡ್ ವೇಳೆ ಜಿಲ್ಲಾಡಳಿತದ ಜತೆ ಎಸ್ ಸಿಡಿಸಿಸಿ ಬ್ಯಾಂಕ್ ನೀಡಿದ ಸಹಕಾರ ಎಂದಿಗೂ ಮರೆಯಲು ಸಾಧ್ಯವಿಲ್ಲ. ಸಹಕಾರಿ ರಂಗದ ಮೂಲಕ ಬ್ಯಾಂಕ್ ಸೇವೆಯನ್ನು ಮನೆ ಮನೆಗೆ ತಲುಪಿಸಿದ ಕೀರ್ತಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಸಲ್ಲುತ್ತದೆ. ಸಹಕಾರಿ ರಂಗದಲ್ಲಿ ಸಾಕಷ್ಟು ದೂರದ ಹಾಗೂ ಗಟ್ಟಿ ಧ್ವನಿ ಆಗಿರುವ ರಾಜೇಂದ್ರ ಕುಮಾರ್ ಅವರು 77ನೇ ವಸಂತಕ್ಕೆ ಕಾಲಿಟಿದ್ದಾರೆ. ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದರು.
ಸಮಾರಂಭದಲ್ಲಿ ನಬಾರ್ಡ್ ಡಿಜಿಎಂ ಜಗದೀಶ್, ದ.ಕ. ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಅಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ದೇವರಾಜ್, ರಾಜ್ಯ ಸಹಕಾರಿ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಲಿಂಗರಾಜು, ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರಾದ ಭಾಸ್ಕರ್ ಎಸ್. ಕೋಟ್ಯಾನ್, ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ. ಜಯರಾಮ್ ರೈ, ಸದಾಶಿವ ಉಳ್ಳಾಲ್, ಮೋನಪ್ಪ ಶೆಟ್ಟಿ ಎಕ್ಕಾರು, ವಾದಿರಾಜ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಕಣಚೂರು ಮೋನು, ನವೋದಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮೇಘರಾಜ ಜೈನ್, ಆಕಾಶ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುನಿರಾಜು, ಬ್ಯಾಂಕ್ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಗೋಪಾಲಕೃಷ್ಣ ಭಟ್ ಇದ್ದರು.
ಕಟೀಲು ಕ್ಷೇತ್ರದ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಅವರು ಆಶೀರ್ವಚನ ನೀಡಿದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು.
ಆರ್ಥಿಕ ಸ್ವಾವಲಂಬನೆಗೆ ಹೆಜ್ಜೆ: ಡಾ. ರಾಜೇಂದ್ರ ಕುಮಾರ್
ದೇಶದ ರಾಷ್ಟ್ರೀಕೃತ ಬ್ಯಾಂಕ್ ಗಳು, ವಾಣಿಜ್ಯ ಬ್ಯಾಂಕ್ ಗಳು ವಿಲೀನ ಆಗುತ್ತಿವೆ. ಆದರೆ ಸಹಕಾರಿ ಬ್ಯಾಂಕ್ ಗಳು ಗ್ರಾಮೀಣ ಪ್ರದೇಶಗಳಲ್ಲಿ ಶಾಖೆ ಆರಂಭಿಸುವ ಮೂಲಕ ಗ್ರಾಹಕರಿಗೆ ಸೇವೆ ನೀಡುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳ ನೀಡದೇ ಇರುವ ಸಾಲದ ಸಹಾಯವನ್ನು ಸಹಕಾರಿ ಬ್ಯಾಂಕ್ ಗಳು ಬೇಗನೇ ನೀಡುತ್ತಿವೆ. ರಾಜ್ಯದ ಲಕ್ಷಾಂತರ ರೈತರಿಗೆ ಸಹಾಯ ಮಾಡಿದ್ದೇವೆ. ಜಿಲ್ಲಾ ಬ್ಯಾಂಕ್ ಗಳಿಗಿಂತ ಹೆಚ್ಚು ಲಾಭ ಪತ್ತಿನ ಸಹಕಾರಿ ಬ್ಯಾಂಕುಗಳ ಮೂಲಕ ನಡೆಯುತ್ತಿದೆ. 9 ಜಿಲ್ಲೆಗಳಲ್ಲಿ ನವೋದಯ ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರಿಗೆ ಆರ್ಥಿಕ ಸಹಕಾರ , ಸ್ವಾವಲಂಬನೆಗೆ ಸಹಕಾರ ನೀಡಿದೆ ಎಂದು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್ . ರಾಜೇಂದ್ರ ಕುಮಾರ್ ಹೇಳಿದರು.
ಸಹಕಾರಿ ದಿಗ್ಗಜನಿಗೆ ಅಭಿವಂದನೆ: ದೇವಿಪ್ರಸಾದ್ ಶೆಟ್ಟಿ
ಸಹಕಾರಿ ಕ್ಷೇತ್ರದ ಬಲವರ್ಧನೆಗೆ ತನ್ನದೇ ಆದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್ ಅನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿರುವ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿದವರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಾದರಿ ಸಹಕಾರಿ ನಾಯಕರಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಗುರುತಿಸಿ ಕೊಂಡಿರುವ ಅವರ 77ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆಸಲು ಅವಿಭಜಿತ ಜಿಲ್ಲೆಯ ಸಮಸ್ತ ಸಹಕಾರಿಗಳ ತೀರ್ಮಾನ ಮಾಡಿದ್ದೇವೆ ಎಂದು ಅಭಿವಂದನಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು.




