ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಪಾರದರ್ಶಕ, ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆ ಆಗಿರುವ ಎಲ್ಲ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದ್ವಿತೀಯ ಪರೀಕ್ಷೆ ಕುರಿತ ಪೂರ್ವ ಸಿದ್ದತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ದ್ವಿತೀಯ ಪಿಯು ಪರೀಕ್ಷೆಗಳು ಫೆ. 28 ರಿಂದ ಮಾರ್ಚ್ 17 ರವರೆಗೆ ಜಿಲ್ಲೆಯ 35 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಈ ಬಾರಿಯ ಜಿಲ್ಲೆಯಲ್ಲಿ 5,939 ಬಾಲಕರು ಮತ್ತು 8,545 ಬಾಲಕಿಯರು ಸೇರಿದಂತೆ ಒಟ್ಟು 14,484 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ಸಂಪೂರ್ಣ ಜವಾಬ್ದಾರಿ ಹೊಂದಿದ್ದು, ನಿಯಮಗಳಲ್ಲಿ ಸೂಚಿಸಿರುವಂತೆ ಯಾವುದೇ ಲೋಪ ಆಗದಂತೆ ಪರೀಕ್ಷೆಗಳನ್ನು ನಡೆಸಬೇಕು. ಜಿಲ್ಲೆಯಲ್ಲಿನ ಸೂಕ್ಷ್ಮ ಪರೀಕ್ಷೆ ಕೇಂದ್ರಗಳಲ್ಲಿ, ಕಟ್ಟೆಚ್ಚರ ವಹಿಸಬೇಕು. ಪರೀಕ್ಷಾ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಆಸನಗಳ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ರೀತಿಯ ಪರೀಕ್ಷಾ ಅವ್ಯವಹಾರಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.

ವ್ಯಾಟ್ಸ್ ಆ್ಯಪ್, ಇನ್‌ಸ್ಟಾಗ್ರಾಮ್ ಅಥವಾ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಗಳಂತಹ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಕಿವಿಗೊಡಬಾರದು. ಇಂತಹ ವದಂತಿ ಹರಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಪೊಲೀಸ್ ಭದ್ರತೆಯಲ್ಲಿ, ಜಿ. ಪಿ. ಎಸ್. ಅಳವಡಿಸಿದ ವಾಹನಗಳ ಮೂಲಕ ಪರೀಕ್ಷೆ ಕೇಂದ್ರಗಳಿಗೆ ತಲುಪಿಸಲು ಹಾಗೂ ಎಲ್ಲ ಕೇಂದ್ರಗಳಿಗೆ ಪೊಲೀಸ್ ಭದ್ರತೆ ಒದಗಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.
ಪ್ರಾಧಿಕಾರದ ಮಾರ್ಗಸೂಚಿಯಂತೆ ಪರೀಕ್ಷೆಗಳನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಸಬೇಕು. ವೆಬ್ ಕಾಸ್ಟಿಂಗ್ ನಿರ್ವಹಣೆಗೆ ಮಾಡಬೇಕು. ಪರೀಕ್ಷೆ ಕೊಠಡಿಯೊಳಗೆ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್ , ಮೈಕ್ರೋಫೋನಗಳು, ಬ್ಲೂ ಟೂತ್ ಸಾಧನ, ಅನುಮತಿಸಲಾಗುವುದಿಲ್ಲ. ಸಿಬ್ಬಂದಿ ಮೊಬೈಲ್ ಬಳಕೆಗೂ ಅವಕಾಶವಿಲ್ಲ, ಫೋಟೋಗ್ರಾಫಿಯನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದರು.
ಪರೀಕ್ಷೆ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಬೇಕು, ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತಗೊಳಿಸದಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಬಸ್ ಸಂಚಾರಕ್ಕೆ ಅನಾನುಕೂಲವಾಗುವಂತೆ ಅಗತ್ಯ ಸಂಖ್ಯೆಯ ಬಸ್‌ಗಳ ವ್ಯವಸ್ಥೆ ಮಾಡುವಂತೆ ಕೆ. ಎಸ್. ಆರ್. ಟಿ. ಸಿ. ಅಧಿಕಾರಿಗಳಿಗೆ ಹಾಗೂ ಎಲ್ಲ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮವಾಗಿ ಸಿಬ್ಬಂದಿ ನಿಯೋಜಿಸಬೇಕು. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಸಿರುವ ಅಧಿಕಾರಿಗಳು ಜವಾಬ್ದಾರಿಯುತವಾಗಿ ಹಾಗೂ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸತೀಶ್ ನಾಯ್ಕ ಹಾಗೂ ಪರೀಕ್ಷಾ ಕರ್ತವ್ಯಕ್ಕೆ ನಿಯೋಜಸಿರುವ ಅಧಿಕಾರಿಗಳು ಇದ್ದರು.



