ಬಾಗಲಕೋಟೆ: ಇಲ್ಲಿನ ಕಿಲ್ಲಾ ಓಣಿಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ಸಾಗುತ್ತಿದ್ದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ 7 ಮಂದಿಯನ್ನು ಬಂಧನ ಮಾಡಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಂಝೀರ್ (28) ಬಂಧಿತ ಆರೋಪಿ. ಈತ ಮಸೀದಿ ಹೊರಗೆ ಇಟ್ಟಿರುವ ಶೂ ರ‍್ಯಾಕ್ ಅಡಿಗೆ ಇಟ್ಟಿದ ಎರಡು ಕಲ್ಲುಗಳನ್ನು ಎಸೆದಿದ್ದು, ಕಲ್ಲು ಪೊಲೀಸರ ಮೇಲೆ ಮತ್ತು ಸಾರ್ವಜನಿಕರೊಬ್ಬರ ಮೇಲೆ ಬಿದ್ದಿದೆ. ಕಲ್ಲೆಸೆತದಿಂದ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿಸಿದರು.
ಕಲ್ಲು ತೂರಾಟ ಮೆರವಣಿಗೆ ಮಸೀದಿ ಬಳಿ ತಲುಪುವ ಮೊದಲೇ ನಡೆದಿದೆ. ಒಬ್ಬ ವ್ಯಕ್ತಿ ಕೃತ್ಯ ಎಸಗಿದ್ದಾನೆ. ಬೇರೆ ಯಾರೂ ಈ ಕೃತ್ಯದಲ್ಲಿ ಭಾಗಿ ಆಗಿಲ್ಲ. ಇದು ಪೂರ್ವ ಯೋಜಿತ ಕೃತ್ಯ ಆಗಿರಲಿಲ್ಲ. ಡಿಜೆ ವಿಚಾರಕ್ಕಾಗಿಯಾಗಿ ಕಲ್ಲು ತೂರಾಟ ನಡೆದಿಲ್ಲ. ಕಲ್ಲು ತೂರಾಟ ನಡೆದಿರುವ ಸಂದರ್ಭ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಏಳು ಮಂದಿ ಬಂಧಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದರು.



