ಮಂಗಳೂರು: ದ.ಕ. ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ 59 ಪರೀಕ್ಷಾ ಕೇಂದ್ರಗಳಲ್ಲಿ 18,745 ವಿದ್ಯಾರ್ಥಿಗಳು ಮತ್ತು 18,592 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 37,337 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಎಸ್ಸೆಸ್ಸೆಎಲ್ಸಿ ಪರೀಕ್ಷೆಗೆ ಬೇಕಾದ ಎಲ್ಲ ಸಿದ್ದತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದ್ದು, ನಗುಮುಖದಲ್ಲಿ ಪರೀಕ್ಷೆ ಬರೆಯುವಂತಹ ವಾತಾವರಣ ನಿರ್ಮಾಣಕ್ಕೆ ಅಣಿಯಾಗಿದ್ದೇವೆ. ಪರೀಕ್ಷೆ ವೇಳೆ ಮಕ್ಕಳಲ್ಲಿ ಧೈರ್ಯ ಮತ್ತು ಭರವಸೆ ತುಂಬಲು ಜಿಲ್ಲಾಡಳಿತ ಕೆಲ ದಿನಗಳಲ್ಲಿ ಆಯ್ದ ಶಾಲೆಗಳಿಗೆ ಭೇಟಿ ನೀಡಲಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್. ವಿ. ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪರೀಕ್ಷೆ ವೇಳೆ ಬರುವ ಆತಂಕ, ಖಿನ್ನತೆ ಇರುವವರ ಜತೆ ಆಪ್ತ ಸಮಾಲೋಚನೆ ನಡೆಸಲು ಮತ್ತು ಸಲಹೆ ನೀಡಲು ಟೆಲಿಮಾನಸ ಯೋಜನೆ ಜಾರಿಯಲ್ಲಿದೆ. ರಾಜ್ಯ ಮಟ್ಟದಲ್ಲಿ 14416 ಸಂಖ್ಯೆ ಡಯಲ್ ಮಾಡಿದರೆ ಸಹಾಯ ಸಿಗಲಿದೆ. ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕವಾಗಿ ಕರೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಜ್ಞರನ್ನು ಗುರುತಿಸಲು ವೆನ್‌ಲಾಕ್ ಅಧೀಕ್ಷಕ ಮತ್ತು ಡಿಎಚ್‌ಒ ಅವರಿಗೆ ಸೂಚನೆ ನೀಡಲಾಗಿದೆ ಎಂದರು.
15 ಸರಕಾರಿ, 22 ಖಾಸಗಿ ಮತ್ತು 22 ಅನುದಾನ ರಹಿತ ಖಾಸಗಿ ಕಾಲೇಜುಗಳು ಸೇರಿದಂತೆ 59 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಮಂಗಳೂರು 21, ಬಂಟ್ವಾಳ 6, ಬೆಳ್ತಂಗಡಿ 8, ಪುತ್ತೂರು 5, ಸುಳ್ಯ 2, ಕಡಬ 5, ಮೂಡಬಿದ್ರೆ 6, ಉಳ್ಳಾಲ 4, ಮೂಲ್ಕಿ ತಾಲೂಕಿನಲ್ಲಿ 2 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.
ದ.ಕ. ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ 18, 559 ಮಂದಿ ಪರೀಕ್ಷೆ ಎದುರಿಸಲಿದ್ದಾರೆ. ಕಲಾವಿಭಾಗದಲ್ಲಿ 3,7337 ಮಂದಿ ಪರೀಕ್ಷೆಗೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 15,054 ಮಂದಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಜಿಲ್ಲಾ ವ್ಯಾಪ್ತಿಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳ ಸಾಗಣೆಗೆ 16 ಮಾರ್ಗಗಳನ್ನು ಕಲ್ಪಿಸಲಾಗಿದೆ, ತ್ರಿಸದಸ್ಯ ಸಮಿತಿ ಸದಸ್ಯರ 16 ತಂಡಗಳನ್ನು ನಿಯೋಜಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ಪರೀಕ್ಷಾ ಕೇಂದ್ರಗಳ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೃಢೀಕರಣ ಪಡೆಯಲಾಗಿದೆ. ಪರೀಕ್ಷಾ ಕಾರ್ಯಕ್ಕೆ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರಶ್ನೆಪತ್ರಿಕೆ ವಿತರಣೆ ಮತ್ತು ಜಿಲ್ಲಾ ಜಾಗೃತದಳದ ಸದಸ್ಯರುಗಳಿಗೆ ವಾಹನ ವ್ಯವಸ್ಥೆ ಹಾಗೂ ಜಿಪಿಎಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಕೆಎಸ್‌ಇಎಸ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಅಧಿಕಾರಿ, ಸಿಬ್ಬಂದಿ ಬಯೋಮೆಟ್ರಿಕ್ ಹಾಜರಾತಿಗೆ ನೋಂದಣಿ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾಕೇಂದ್ರಗಳಿಗೆ ಗೌಪ್ಯವಸ್ತುಗಳನ್ನು ವಿತರಿಸುವ ಚಟುವಟಿಕೆಗಳನ್ನು ಖಜಾನೆಯ ಒಳಗೆ ಮತ್ತು ಹೊರಗೆ ನಿರಂತರ ಸಿಸಿಟಿವಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ ಎಂದರು.
ಪ್ರತೀ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಕೇಂದ್ರ ಮುಖ್ಯ ಅಧೀಕ್ಷಕ, ಅಭಿರಕ್ಷಕ, ಸ್ಥಾನೀಯ ಜಾಗೃತ ದಳದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 350 ಕ್ಕಿಂತ ಹೆಚ್ಚು ಮಕ್ಕಳಿದ್ದ ಕೇಂದ್ರಗಳಿಗೆ ಒಬ್ಬ ಉಪ ಮುಖ್ಯ ಅಧೀಕ್ಷಕರನ್ನು ನಿಯೋಜಿಸಲಾಗಿದೆ. ಪ್ರತೀ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ಸೂಕ್ತ ಆಸನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ, ಗಾಳಿ ಬೆಳಕು ಇತ್ಯಾದಿ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ ಎಂದರು.
ಮಕ್ಕಳು ಪರೀಕ್ಷೆಯನ್ನು ಹಬ್ಬವೆಂದು ಪರಿಗಣಿಸಿ ಪರೀಕ್ಷೆಗೆ ಹಾಜರಾಗಲು ಎಲ್ಲ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲು ಸೂಚಿಸಲಾಗಿದೆ. ವಿಕಲಚೇತನ ಮಕ್ಕಳಿಗೆ ನೆಲ ಮಹಡಿಯಲ್ಲಿ ಆಸನ ವ್ಯವಸ್ಥೆ ಸೇರಿದಂತೆ, ಮಂಡಳಿ ನಿಗದಿಪಡಿ ಸಿದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅಗತ್ಯ ಭದ್ರತಾ ವ್ಯವಸ್ಥೆ, ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎಸ್ಸೆಸ್ಸೆಲ್ಸಿ 2 ಪೂರ್ವ ಸಿದ್ಧತಾ ಪರೀಕ್ಷೆ ನಡೆಸಿದ್ದು, ಇನ್ನೊಂದು ಸಿದ್ದತಾ ಪರೀಕ್ಷೆ ಬಾಕಿ ಇದ್ದು, ಅದು ಮುಗಿದ ನಂತರ ಮತ್ತಷ್ಟು ವ್ಯವಸ್ಥಿತ ರೂಪರೇಷಗಳನ್ನು ಮಾಡಲಾಗುತ್ತದೆ ಎಂದರು.
ಜಿ. ಪಂ ಸಿಇಒ ವಿನಾಯಕ ನರ್ವಾಡೆ, ಎಸ್ಪಿ ಡಾ. ಅರುಣ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶಿಧರ ಜಿ.ಎನ್, ಡಿಡಿಪಿಯು ರಾಜೇಶ್ವರಿ ಇದ್ದರು.
ಮಾರ್ಚ್ 18 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: ದರ್ಶನ್
ಮಾರ್ಚ್ 18 ರಿಂದ ಆರಂಭ ಆಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 29, 397 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯ ಒಟ್ಟು 524 ಪ್ರೌಢಶಾಲೆಗಳ ಅಭ್ಯರ್ಥಿಗಳು 91 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. 22 ಕ್ಲಸ್ಟರ್ ಹಾಗೂ 38 ಕ್ಲಸ್ಟರ್ ರಹಿತ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. 22 ಕ್ಲಸ್ಟರ್ ಗಳಲ್ಲಿ 53 ಪರೀಕ್ಷಾ ಕೇಂದ್ರಗಳಿವೆ. ಪರೀಕ್ಷಾ ಕೇಂದ್ರಗಳಲ್ಲಿ ಪ್ರತೀ ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, 1265 ಕೊಠಡಿಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.



