ಕಾರವಾರ: ಜಿಲ್ಲೆಯ ಗುಡ್ಡಗಾಡು ಪ್ರದೇಶಗಳು ಮತ್ತು ಪ.ಜಾತಿ ಮತ್ತು ಪರಿಶಿಷ್ಟ ಪಂಗಡದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಇರುವ ಪ್ರದೇಶಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಹೊಸ ನ್ಯಾಯಬೆಲೆ ಅಂಗಡಿ ಪ್ರಾರಂಭಕ್ಕೆ ಪ್ರಸ್ತಾವ ಸಲ್ಲಿಸುವಂತೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರು ಸೂಚನೆ ನೀಡಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತೀ ತಿಂಗಳು ಪಡಿತರ ಪಡೆಯಲು ತಮ್ಮ ವಾಸಸ್ಥಳದಿಂದ ಅತ್ಯಂತ ದೂರ ಕ್ರಮಿಸಬೇಕಾದ ಸಾರ್ವಜನಿಕರಿಗೆ ಅನುಕೂಲ ಆಗುವಂತೆ, ನಿಗದಿತ ಮಾರ್ಗಸೂಚಿ ಅನ್ವಯ ಸಮೀಪದ ಪ್ರದೇಶಗಳಲ್ಲಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯುವ ಕುರಿತಂತೆ ಪರಿಶೀಲನೆ ನಡೆಸಬೇಕು, ಈಗಾಗಲೇ ಹೊಸ ನ್ಯಾಯಬೆಲೆ ಅಂಗಡಿ ತರೆಯಲು ಮನವಿ ಸಲ್ಲಿಸಿರುವ ಸಾರ್ವಜನಿಕರ ಮನವಿಗಳನ್ನು ಕೂಡ ಪರಿಗಣಿಸಿ ಪ್ರಸ್ತಾವ ಸಲ್ಲಿಸುವಂತೆ ತಿಳಿಸಿದರು.

ಈಗಾಗಲೇ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಪಡಿತರ ಚೀಟಿಗಳನ್ನು ಹೊಂದಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಪಡಿತರ ಪಡೆಯಲು ದೂರ ಪ್ರದೇಶದ ಸಮಸ್ಯೆಯಿದ್ದಲ್ಲಿ , ಹೆಚ್ಚುವರಿ ಪಡಿತರ ಚೀಟಿಗಳಿಗೆ ಹೊಸ ಅಂಗಡಿ ತೆರೆಯಬೇಕು, ಹೊಸ ಪಡಿತರ ಅಂಗಡಿಗೆ ಪ್ರಸ್ಥಾವ ಸಲ್ಲಿಸುವ ಮುನ್ನ ಸಂಬಂದಪಟ್ಟ ತಾಲೂಕುಗಳ ತಹಶೀಲ್ದಾರ್‌ಗಳ ವರದಿ ಪಡೆಯಬೇಕು ಎಂದರು.
ಸಾರ್ವಜನಿಕರು ತಮ್ಮ ಗ್ರಾಮಗಳಿಗೆ ಹೊಸ ಪಡಿತರ ಅಂಗಡಿಗಳ ಅಗತ್ಯವಿದ್ದಲ್ಲಿ ತಮ್ಮ ತಾಲೂಕಿನ ಆಹಾರ ನಿರೀಕ್ಷಕರಿಗೆ ಅಥವಾ ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ಮನವಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್ ಹಾಗೂ ವರ್ಚುವಲ್ ಮೂಲಕ ಎಲ್ಲಾ ತಾಲೂಕುಗಳ ತಹಶೀಲ್ದಾರ್ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಇದ್ದರು.



