ಕಾರವಾರ (ಸಿದ್ದಾಪುರ): ಹಣದ ಆಸೆಯಿಂದ ಪಿಗ್ಮಿ ಸಂಗ್ರಹ ಮಾಡುತ್ತಿದ್ದ ವೃದ್ಧ ಮಹಿಳೆ ಗೀತಾ ಹುಂಡೇಕರ್ (75) ಎಂಬುವವರನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಅಭಿಜಿತ್ ಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಸಿರಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ತೀರ್ಪು ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ್ ಕಿಣಿ ಅವರು, ಆರೋಪಿ ಅಭಿಜಿತ್ ಗಣಪತಿ ಮಡಿವಾಳ ಅವರ ಮೇಲಿನ ಆಪಾದನೆಗಳು ಸಾಬೀತು ಆಗಿರುವ ಹಿನ್ನೆಲೆಯಲ್ಲಿ ತಪ್ಪಿತಸ್ಥನಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು. 32 ಸಾವಿರ ರೂಪಾಯಿಗಳ ದಂಡ ವಿಧಿಸಲಾಗಿದೆ.


ವೃದ್ಧೆಯ ಬಳಿ ಪಿಗ್ಮಿ ಹಣ ಇರುತ್ತ ಎಂಬ ಮಾಹಿತಿ ಪಡೆದಿದ್ದ ಆರೋಪಿ, ಆಸೆಯಿಂದ ಈ ಕೃತ್ಯಕ್ಕೆ ಮುಂದಾಗಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ರಾತ್ರಿ ವೇಳೆ ಮನೆಗೆ ನುಗ್ಗಿ ಆರೋಪಿ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ನಂತರ ಕಿವಿಯೋಲೆ ಸೇರಿದಂತೆ ಆಭರಣಗಳು ಹಾಗೂ ಪಿಗ್ಮಿಯಿಂದ ಸಂಗ್ರಹಿಸಿದ್ದ ನಗದು ಹಣ ದೋಚಿ ಪರಾರಿ ಆಗಿದ್ದ.
ವೃದ್ಧೆ ಅನುಮಾನಾಸ್ಪದ ಸಾವಿನ ಬಗ್ಗೆ ಸಿದ್ದಾಪುರ ಠಾಣೆಯ ಇನ್ ಸ್ಪೆಕ್ಟರ್ ಸೀತಾರಾಮ್ ಅವರು ಪ್ರಕರಣದ ತನಿಖೆ ಆರಂಭಿಸಿದ್ದರು. ಆರೋಪಿ ಬಗ್ಗೆ ಎಲ್ಲ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿ ಬಂಧನ ಮಾಡಲಾಗಿತ್ತು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಭಿಜಿತ್ ಗಣಪತಿ ಮಡಿವಾಳ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ ಈ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ, ಸರ್ಕಾರಿ ಅಭಿಯೋಜಕರ ವಾದ ಹಾಗೂ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಆರೋಪಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ. ಜತೆಗೆ ದಂಡ ವಿಧಿಸಿ, ಸಂತ್ರಸ್ತೆ ಪುತ್ರಿಯರಿಗೆ ಪರಿಹಾರ ನೀಡುವಂತೆ ಆದೇಶಿಸಲಾಗಿದೆ. ಈ ಪ್ರಕರಣದಲ್ಲಿ ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಶೀಘ್ರ ವಿಚಾರಣೆ ನಡೆದು ಕಡಿಮೆ ಅವಧಿಯಲ್ಲೇ ತೀರ್ಪು ಪ್ರಕಟ ಆಗಿದೆ.



