ರಾಯಚೂರು: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಿಸಿ, ರಾಜ್ಯದಲ್ಲಿ ರಾಯಚೂರು ಜಿಲ್ಲೆ ಉತ್ತಮ ಸ್ಥಾನಕ್ಕೆ ಬರುವ ಹಾಗೇ ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಫಲಿತಾಂಶ ಹೆಚ್ಚಳಕ್ಕೆ ಬೇಕಾದ ಎಲ್ಲ ಅಗತ್ಯ ಕ್ರಮಕ್ಕೆ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಶಿಕ್ಷಕರ ಶ್ರಮ ಬಹಳ ಪ್ರಮುಖ ಕೂಡ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ವಿಶೇಷವಾಗಿ ಗಮನಹರಿಸಿ ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕುಮಾರ ಕಾಂದೂ ಅವರು ಮಾತನಾಡಿ, ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ದತೆ ಮಾಡಲು ಪೂರಕ ಬೋಧನೆ ಮತ್ತು ಪುನರಾವರ್ತನೆಗೆ ಆದ್ಯತೆ ನೀಡಬೇಕು. ಹಿಂದುಳಿದ ವಿದ್ಯಾರ್ಥಿಗಳನ್ನು ಶಿಕ್ಷಕರು ದತ್ತು ಪಡೆದು ವೈಯಕ್ತಿಕ ಮಾರ್ಗದರ್ಶನ ನೀಡುವುದರ ಜತೆಗೆ ಪರೀಕ್ಷಾ ದೃಷ್ಟಿಯಿಂದ ಪ್ರಮುಖ ಆಗಿರುವ ವಿಷಯಗಳ ಬಗ್ಗೆ ಹೆಚ್ಚಿನ ತರಬೇತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಡಿ.ಬಡಿಗೇರ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಆರ್‌ಪಿ, ಬಿಆರ್‌ಪಿ ಹಾಗೂ ವಿವಿಧ ಶಾಲೆಗಳು ಮುಖ್ಯ ಶಿಕ್ಷಕರು ಇದ್ದರು.



