ಮಂಗಳೂರು: 2024-25 ನೇ ಸಾಲಿನಲ್ಲಿ ಉಂಟಾಗಿರುವ 83.12 ಕೋಟಿ ರೂಪಾಯಿ ಆದಾಯ ಕೊರತೆ ಸರಿದೂಗಿಸಲು ಪ್ರತಿ ಯುನಿಟ್‌ಗೆ ತಲಾ 11 ರಿಂದ 12 ಪೈಸೆಗಳಷ್ಟು ದರ ಏರಿಕೆ ಮಾಡುವ ಪ್ರಸ್ತಾವವನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸಭೆಯಲ್ಲಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಆರ್. ಜಯ್ ಕುಮಾರ್ ಅವರು ವಾರ್ಷಿಕ ಕಾರ್ಯನಿರ್ವಹಣಾ ಪರಿಶೀಲನೆ ವರದಿಯಲ್ಲಿ ಪ್ರಸ್ತಾವ ಮಂಡಿಸಿದರು.
2024–25ರಲ್ಲಿ 5,095.79 ಕೋಟಿ ವಾರ್ಷಿಕ ವರಮಾನ ಅವಶ್ಯಕತೆ ಪ್ರಸ್ತಾವ ಆಯೋಗ ಅನುಮೋದಿಸಿತ್ತು. ಆದರೆ, ಆ ಸಾಲಿನಲ್ಲಿ 5,913.5 ಕೋಟಿ ವರಮಾನ ಮಾತ್ರ ಬಂದಿದೆ. ವಿದ್ಯುತ್ ಶುಲ್ಕದ ವರಮಾನ 5,830.38 ಕೋಟಿಗೆ ಹೆಚ್ಚಳ ಆಗಿರುವುದರ ಹೊರತಾಗಿ 83.12 ಕೋಟಿ ಕೊರತೆ ಎದುರಾಗಿದೆ ಪ್ರಸ್ತಾವದಲ್ಲಿ ತಿಳಿಸಿದರು.
ಮೆಸ್ಕಾಂ 2024–25ನೇ ಸಾಲಿನಲ್ಲಿ 83.12 ಕೋಟಿ ವರಮಾನ ಕೊರತೆ ಉಂಟಾಗಿದೆ ಎಂದು ತನ್ನ ವಾರ್ಷಿಕ ಕಾರ್ಯನಿರ್ವಹಣಾ ಪರಿಶೀಲನೆ ವರದಿಯಲ್ಲಿ ತಿಳಿಸಿದ್ದು, ಈ ನಷ್ಟ ಸರಿದೂಗಿಸಲು ಅವಕಾಶ ಕಲ್ಪಿಸುವಂತೆ ಕೋರಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸಲಿದ್ದೇವೆ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ)ದ ಅಧ್ಯಕ್ಷ ಪಿ.ರವಿಕುಮಾರ್ ಈ ವೇಳೆ ತಿಳಿಸಿದರು.
ಮೆಸ್ಕಾಂ ಪ್ರಸ್ತಾವ ಹಾಗೂ ಗ್ರಾಹಕರ ಆಕ್ಷೇಪ ಆಲಿಸಿದ್ದು, ಗ್ರಾಹಕರಿಂದ ಉತ್ತಮ ರೀತಿಯ ಸಲಹೆ ಸ್ವೀಕಾರ ಆಗಿದೆ. ಉಳಿದ ಎಸ್ಕಾಂಗಳಿಗೆ ಹೋಲಿಸಿದರೆ ಮೆಸ್ಕಾಂ ಉತ್ತಮ ಸಾಧನೆ ಮಾಡಿದೆ. ಈ ಬಾರಿ ದರ ಪರಿಷ್ಕರಣೆ ಇಲ್ಲ. ನಷ್ಟದ ಬಗ್ಗೆ ಮೆಸ್ಕಾಂ ಪ್ರಸ್ತಾವ ಪರಿಶೀಲಿಸಲಾಗುವುದು ಎಂದರು.
ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಅವರು ಮಾತನಾಡಿ, 2020-21ನೆ ಸಾಲಿನಲ್ಲಿ ಮೆಸ್ಕಾಂ ನಿಗದಿತ ಮಾರುಕಟ್ಟೆ ದರಕ್ಕಿಂತ ಹೆಚ್ಚುವರಿ ದರದಲ್ಲಿ ವಿದ್ಯುತ್ ಕಂಬಗಳನ್ನು ಖರೀದಿಸಿದೆ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಆಗ ಮಾಡಿದ ಸಾಲಕ್ಕೆ ಈಗ ನಾವು ಬಡ್ಡಿ ಪಾವತಿಸುವಂತೆ ಆಗಿದೆ. ಹೀಗಾಗಿ ಮೆಸ್ಕಾಂ ದರ ಕಡಿಮೆ ಮಾಡಬೇಕು ಹಾಗೂ ಆಯೋಗವು ಮೆಸ್ಕಾಂನ ಅನಿಯಮಿತ ಚಟುವಟಿಕೆಗಳಿಗೆ ನಿಯಂತ್ರಣ ಹೇರಬೇಕು ಎಂದರು.
ಮೆಸ್ಕಾಂ ಸಿಬ್ಬಂದಿಗೆ ಪಿಂಚಣಿ ಪಾವತಿಸುವ ಹೊರೆಯನ್ನು ಗ್ರಾಹಕರು ಹೊರುತ್ತಿದ್ದಾರೆ. ಹೊಸ ಸಂಪರ್ಕಗಳು ಮತ್ತು ನೀರಾವರಿ ಪಂಪ್ ಸೆಟ್ ಸಂಪರ್ಕಗಳಿಗೆ ಭಾರಿ ಶುಲ್ಕ ವಿಧಿಸಲಾಗುತ್ತದೆ. ಮಲ್ಲಂದೂರಿನಲ್ಲಿ ಕಾಫಿ ಎಸ್ಟೇಟ್ ಅನುಕೂಲಕ್ಕಾಗಿ ಸಬ್‌ಸ್ಟೇಷನ್ ನಿರ್ಮಿಸಲಾಗಿದೆ ಎಂದರು.
ಈ ವೇಳೆ ಮೆಸ್ಕಾಂ ಎಂಡಿ ಜಯಕುಮಾರ್ ಮಾತನಾಡಿ, ಸಬ್‌ಸ್ಟೇಷನ್ 67 ಹಳ್ಳಿಗಳಿಗೆ ಪ್ರಯೋಜನವನ್ನು ನೀಡುತ್ತದೆ. 496 ಹೊಸ ಲೈನ್ ಮ್ಯಾನ್ ಗಳ ನೇಮಕ ಮಾಡಲಾಗಿದೆ. ಇದರಲ್ಲಿ ಒಬ್ಬರೂ ಕೂಡ ಕರಾವಳಿ ಭಾಗದವರಿಲ್ಲ. ಕರಾವಳಿ ಭಾಗದವರನ್ನು ಲೈನ್ ಮ್ಯಾನ್ ತರಬೇತಿ ನೀಡಿದರೂ ಬರುತ್ತಿಲ್ಲ. ಅದರಲ್ಲಿಯೂ ಈಗ 396 ಮಂದಿ ವರ್ಗಾವಣೆ ಬಯಸಿದ್ದಾರೆ ಎಂದರು.

ಜಿ.ಕೆ.ಭಟ್ ಮಂಗಳೂರು ಮಾತನಾಡಿ, ಮೆಸ್ಕಾಂ ಆಡಳಿತ ವೆಚ್ಚವನ್ನು ಕಡಿಮೆ ಮಾಡಬೇಕು. ದಕ್ಷಿಣ ಭಾರತದ ಕೆಲವು ರಾಜ್ಯದಲ್ಲಿ ವಿದ್ಯುತ್ ದರ ಕಡಿಮೆ ಇದೆ. ಅದೇ ರೀತಿ ಮೆಸ್ಕಾಂ ದರವೂ ಕಡಿಮೆಯಾಗಬೇಕು. ಬೀದಿ ದೀಪ, ಸರಕಾರಿ ಕಚೇರಿ ಸಹಿತ ವಿವಿಧೆಡೆ ಅನಾವಶ್ಯಕವಾಗಿ ವಿದ್ಯುತ್ ನಷ್ಟ ಆಗುವುದನ್ನು ತಪ್ಪಿಸಬೇಕು ಎಂದರು.
ಕಿಸಾನ್ ಸಂಘದ ಚಂದ್ರಶೇಖರ ಶೆಟ್ಟಿ ಅವರು ಮಾತನಾಡಿ, ಮೆಸ್ಕಾಂಗೆ ಲಾಭ ಇಲ್ಲವಾದರೂ ಉಡುಪಿಯಿಂದ ಕಾಸರಗೋಡಿಗೆ ಯುಕೆಟಿಎಲ್ ವಿದ್ಯುತ್ ಸಾಗಾಟಕ್ಕೆ ಮೆಸ್ಕಾಂ 60 ಲಕ್ಷ ರೂ. ಬ್ಯಾಂಕ್ ಬ್ಯಾಲೆನ್ಸ್ ಇಟ್ಟಿರುವುದು ಯಾಕೆ ಎಂದರು.
ಆಯೋಗದ ಸದಸ್ಯ ಎಚ್.ಜೆ.ಜಗದೀಶನ್, ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್, ಆರ್ಥಿಕ ಸಲಹೆಗಾರ ದೇವರಾಜ ಎಂ., ಮುಖ್ಯ ಲೆಕ್ಕಾಧಿಕಾರಿ ಮುರಳೀಧರ ನಾಯಕ್, ತಾಂತ್ರಿಕ ನಿರ್ದೇಶಕ ಹರೀಶ್ ಕುಮಾರ್ ವಿ. ಇದ್ದರು.

ಸಿಒಎಸ್ ಕರಡು ಪ್ರತಿ ತಯಾರಿ: ರವಿಕುಮಾರ್
ವಿದ್ಯುತ್ ವಿತರಣಾ ಪರವಾನಗಿದಾರರಿಗೆ ಸರಬರಾಜು ನಿಯಮಗಳ (ಸಿಒಎಸ್) ಕರಡು ತಿದ್ದುಪಡಿ ತಿಂಗಳೊಳಗೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಅಧ್ಯಕ್ಷ ಪಿ. ರವಿಕುಮಾರ್ ಹೇಳಿದರು.
ತಿದ್ದುಪಡಿಗಳ ಮೂಲಕ ಕೆಇಆರ್‌ಸಿ ಪ್ರಕ್ರಿಯೆ ಸರಳಗೊಳಿಸುತ್ತದೆ. ಕರಡು ಪ್ರಕಟವಾದ ನಂತರ, ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಸೂರ್ಯ ಘರ್
ಕೇಂದ್ರ ಸರ್ಕಾರವು ಪ್ರಾರಂಭಿಸಿದ್ದು, ರಾಜ್ಯದಲ್ಲಿ ಸೂರ್ಯ ಘರ್ ಯೋಜನೆಗೆ ಹೆಚ್ಚು ಜನರು ಒಲವು ತೋರುತ್ತಿಲ್ಲ ಎಂದರು.ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರವು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುತ್ತಿದ್ದು, ಪರಿಣಾಮ ಅನೇಕ ಗ್ರಾಹಕರು ಸೂರ್ಯ ಘರ್ ಯೋಜನೆಯಡಿಯಲ್ಲಿ ಮೇಲ್ಛಾವಣಿ ಸೌರಶಕ್ತಿ ವ್ಯವಸ್ಥೆಗಳನ್ನು ಸ್ಥಾಪಿಸಲು ಆಸಕ್ತಿ ತೋರಿಸುತ್ತಿಲ್ಲ ಎಂದರು.



