ಮಂಗಳೂರು: ಕಾಸರಗೋಡು ಜಿಲ್ಲೆಯ ಕೂಳೂರು ಗ್ರಾಮದ ಪ್ರತಿಷ್ಠಿತ ಉದ್ಯಮಿಗಳು ಹಾಗೂ ಕೊಡುಗೈ ದಾನಿ ಡಾ. ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರ ವಿರುದ್ದ ಕೆಲ ದಿನಗಳಿಂದ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಅಪಪ್ರಚಾರ ಮಾಡಲಾಗುತ್ತಿದ್ದು, ಇವರ ಮೇಲೆ ನಡೆಯುತ್ತಿರುವ ಅಪಪ್ರಚಾರ ಹಾಗೂ ಇಲ್ಲ ಸಲ್ಲದ ಮಾನಹಾನಿ ಹಾಗೂ ಆರೋಪಗಳು ಸಾರ್ವಜನಿಕವಾಗಿ ಚರ್ಚೆ ಆಗಿರುವುದು ತುಂಬಾ ಬೇಸರದ ಸಂಗತಿ. ಯಾವುದೇ ಅಪಪ್ರಚಾರ ಮಾಡಿದರೂ ಬಂಟರ ಸಂಘವು ಅವರ ಪರವಾಗಿ ನಿಲ್ಲಲಿದೆ ಎಂದು ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಹಾಗೂ ವಕೀಲ ಬಿ. ಸುಬ್ಬಯ ರೈ ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಬರುವ ದಿನಗಳಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಪೂರ್ಣ ಬೆಂಬಲವನ್ನು ಈ ಮೂಲಕ ನೀಡುತ್ತೇವೆ. ಇಂದಿನವರೆಗೆ ನಾವೆಲ್ಲರೂ ಒಗ್ಗಟ್ಟಿನಿಂದ ಸಾಮರಸ್ಯದಿಂದ ಹಾಗೂ ಸೌಹಾರ್ದತೆಯಿಂದ ನಡೆದುಕೊಂಡು ಬಂದಿರುತ್ತೇವೆ. ಇನ್ನೂ ಮುಂದೆಯೂ ಇದೇ ರೀತಿಯಲ್ಲಿ ನಡೆದುಕೊಳ್ಳಬೇಕಾಗಿ ಎಲ್ಲ ಸಮಾಜದವರಲ್ಲಿ ಕಳಕಳಿಯಿಂದ ವಿನಯಪೂರ್ವಕವಾಗಿ ವಿನಂತಿಸುತ್ತೇವೆ ಎಂದು ತಿಳಿಸಿದರು.

ರಾಜರಾಜೇಶ್ವರಿ ದೇವಸ್ಥಾನ ದಬಾರ್ ಕಟ್ಟೆ ಆಡಳಿತ ಮೊಕ್ತೇಸರ ಕೆ.ಕೆ. ಶೆಟ್ಟಿ ಕುತ್ತಿಕ್ಕಾರು ಅವರು ಮಾತನಾಡಿ, ಕೆಲವು ದಿನಗಳಿಂದ ನಡೆಯುತ್ತಿರುವ ಘಟನೆಗಳಿಂದ ಮನನೊಂದು ಕುಳೂರು ಕನ್ಯಾನ ಡಾ. ಸದಾಶಿವ ಶೆಟ್ಟಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದು, ಸಮಸ್ತ ಕಾಸರಗೋಡು ಜಿಲ್ಲೆಯ ಬಂಟ ಬಾಂಧವರಿಗೆ ಆಘಾತ ಉಂಟು ಮಾಡಿರುತ್ತದೆ. ಕಾಸರಗೋಡಿನ ಬಂಟರು ಎಲ್ಲರೂ ಒಗ್ಗಟ್ಟಿನಿಂದ ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಆಗಿರುವ ನೋವಿನಲ್ಲಿ ನಾವು ಪೂರ್ಣ ಪ್ರಮಾಣದಲ್ಲಿ ಭಾಗಿ ಆಗಿರುತ್ತೇವೆ ಎಂದರು.
ಮೋಹನ್ ರೈ ಕಯ್ಯಾರು, ಗೋಪಾಲಕೃಷ್ಣ ಶೆಟ್ಟಿ ಕುತ್ತಿಕ್ಕಾರು, ಕಾರ್ತಿಕ್ ಶೆಟ್ಟಿ ಮಜ್ಜಿಬೈಲ್, ಸುರೇಶ್ ಶೆಟ್ಟಿ ಕುಂಜತ್ತೂರು ಇದ್ದರು.



