ಮಂಗಳೂರು: ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸ ಹೋಗುವುದರಲ್ಲಿ ತಪ್ಪೇನಿದೆ, ಅವರು ಯಾಕೆ ವಿದೇಶಕ್ಕೆ ಹೋಗುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಶಾಸಕರು ಅವರ ಹಣದಲ್ಲಿ ಎಲ್ಲಿ ಬೇಕಾದರೂ ಹೋಗಬಹುದು. ಅವರು ಸ್ವತಂತ್ರರಿದ್ದಾರೆ. ಅಧ್ಯಯನ ಪ್ರವಾಸ ಹೋಗುತ್ತಿದ್ದಾರೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ನಲ್ಲಿ ಕೃಷಿಯೇ ಇಲ್ಲವಾ? ಕೃಷಿ ಅಧ್ಯಯನಕ್ಕಾಗಿ ತೆರಳುತ್ತಿದ್ದಾರೆ, ಅದರಲ್ಲೇನು ತಪ್ಪು ಅಂತ ಕಾಣುತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮಂಗಳವಾರ ಮಂಗಳೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ಬಜೆಟ್ ನಲ್ಲಿ ಶಾಸಕರಿಗೇನು ಕೆಲಸ ಇರಲ್ಲ. ಬಜೆಟ್ ತಯಾರು ಮಾಡೋದು ಮುಖ್ಯಮಂತ್ರಿ ಹಾಗೂ ಹಣಕಾಸು ಇಲಾಖೆ. ಶಾಸಕರು ಸಿಎಲ್ ಪಿ ಸಭೆಯಲ್ಲಿ ಬಜೆಟ್ ಕುರಿತು ತಮ್ಮ ಅನಿಸಿಕೆಗಳನ್ನು ಹೇಳಿದ್ದಾರೆ. ಇದೆಲ್ಲವನ್ನೂ ಕ್ರೋಡೀಕರಿಸಿ ಬಜೆಟ್ ತಯಾರು ಮಾಡುತ್ತಾರೆ. ನಮ್ಮಲ್ಲಿ ಸಿದ್ದರಾಮಯ್ಯ ಬಣ ಅಂತ ಇಲ್ಲ. ಎಲ್ಲ ಒಟ್ಟಿಗಿದ್ದೇವೆ, ನಮ್ಮಲ್ಲಿ ಯಾವ ಕುರ್ಚಿ ಕದನವೂ ಇಲ್ಲ ಎಂದರು.

ಸಚಿವ ಎಚ್.ಸಿ ಮಹದೇವಪ್ಪ ಅವರು ದಲಿತ ಸಿಎಂ ಆಗಬೇಕೆಂದು ಹೇಳಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಅವರ ಅಭಿಪ್ರಾಯ, ಮಹದೇವಪ್ಪ ಅವರು ಕೂಡ ಸಿಎಂ ಆಗಲು ಸಮರ್ಥರಿದ್ದಾರೆ. ಯಾವುದೇ ಜವಾಬ್ದಾರಿ ಕೊಟ್ಟರೂ ತೆಗೆದುಕೊಳ್ಳುವುದಕ್ಕೆ ಅವರಿಗೆ ಸಾಮರ್ಥ್ಯ ಇದೆ. ಅದಕ್ಕೆ ಅವರು ಹೇಳಿದ್ದಾರೆ. ಜನ ಸಮುದಾಯದಲ್ಲಿ ಕೆಲವರು ಅವರವರ ಲೀಡರ್ ಅಂತಾ ಆರಿಸಿಕೊಳ್ಳುತ್ತಾರೆ. ಜನ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಅದನ್ನು ತಪ್ಪು ಅಂತಹ ನಾವು ಹೇಳುವುದಕ್ಕೆ ಆಗಲ್ಲ. ಅವರ ಅಭಿಪ್ರಾಯ ಅದು, ನನಗೂ ಆ ಅಭಿಪ್ರಾಯ ಇದೆ, ದಲಿತ ಸಿಎಂ ಯಾಕಾಗಬಾರದು ಎಂದರು.
ಆದರೆ ಕಾಂಗ್ರೆಸ್ ನಲ್ಲಿ ಒಂದು ವ್ಯವಸ್ಥೆ ಇದೆ, ಹೈಕಮಾಂಡ್ ಇದೆ, ಸಂದರ್ಭ ಇದೆ. ಹೈಕಮಾಂಡ್ ಆ ಬಗ್ಗೆ ತೀರ್ಮಾನ ಮಾಡ್ತಾರೆ. ಯಾರೋ ಹತ್ತು ಜನ ನನ್ನ ಪರವಾಗಿ ಜೈಕಾರ ಹಾಕಿದ್ರೆ ಸಿಎಂ ಆಗಲ್ಲ. ಆದರೆ ಹೈಕಮಾಂಡ್ ಅದನ್ನೆಲ್ಲಾ ನೋಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈಗ ಆ ಸಂದರ್ಭ ಇದೆ ಅಂತಹ ನನಗೆ ಅನಿಸಲ್ಲ. ಈಗ ದಲಿತ ಸಿ.ಎಂ ಎಂಬ ಚರ್ಚೆಯೇ ಇಲ್ಲ. ನಾವು ಆಡಳಿತದ ಮೇಲೆ ನಿಗಾ ಇರಿಸಿದ್ದೇವೆ ಎಂದರು.



