ಮಂಗಳೂರು: ಇಲ್ಲಿನ ತಲಪಾಡಿ ಶಾರದಾ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಾತೃ ಪಿತೃ ವಂದನ ಹಾಗೂ ಜ್ಯೋತಿ ಪ್ರದಾನ ಕಾರ್ಯಕ್ರಮ ವೈಭವದಿಂದ ನಡೆಯಿತು.

ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಬಿ. ಪುರಾಣಿಕ್ ಅವರು ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕ ಸಮೀರ್ ಪುರಾಣಿಕ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾರದಾ ರೆಸಿಡೆನ್ಶಿಯಲ್ ಸ್ಕೂಲಿನ ಪ್ರಾಂಶುಪಾಲೆ ಸುಷ್ಮಾ ದಿನ್ಕರ್, ಶಾರದಾ ಡೇ ಬೋರ್ಡಿಂಗ್ ಸ್ಕೂಲಿನ ಪ್ರಾಂಶುಪಾಲ ಮೋಹನದಾಸ್ , ಶಾರದಾ ಡಿಗ್ರಿ ಕಾಲೇಜಿನ ಪ್ರಾಂಶುಪಾಲೆ ಮೀನಾ ಪನಿಕ್ಕರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಡ್ಮಿನಿಸ್ಟ್ರೇಷನ್ ಮ್ಯಾನೇಜರ್ ಪ್ರಫುಲ್ ಕುಮಾರ್ ಮತ್ತು ಅಡ್ಮಿಶನ್ ಮ್ಯಾನೇಜರ್ ವಿವೇಕ್ ತಂತ್ರಿ ಇದ್ದರು. ಅಕ್ಷತಾ ಪ್ರಾರ್ಥನಾ ಗೀತೆಯನ್ನು ಭಾವಪೂರ್ಣವಾಗಿ ಹಾಡಿದರು. ಕಾಲೇಜಿನ ಪ್ರಾಂಶುಪಾಲ ವಿನಾಯಕ್ ಬಿ. ಜಿ. ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಉಪಪ್ರಾಂಶುಪಾಲ ಸುರೇಶ್ ಭಟ್ ಅವರು ವಂದಿಸಿದರು.


ಸಂಸ್ಕೃತ ಉಪನ್ಯಾಸಕರಾದ ಶುಭಕರ್ ಅವರು ಮಾತೃ ಪಿತೃ ವಂದನ ಕಾರ್ಯಕ್ರಮವನ್ನು ಹಾಗೂ ಕನ್ನಡ ಉಪನ್ಯಾಸಕ ಸುರೇಶ್ ರಾವ್ ಅವರು ಜ್ಯೋತಿ ಪ್ರದಾನ ಕಾರ್ಯಕ್ರಮವನ್ನು ಸಮರ್ಪಕವಾಗಿ ನಡೆಸಿಕೊಟ್ಟರು.
ಮಾತೃ ಪಿತೃ ವಂದನ ಕಾರ್ಯಕ್ರಮವು ವಿದ್ಯಾರ್ಥಿಗಳ ಹಾಗೂ ಪೋಷಕರ ಹೃದಯಗಳನ್ನು ಸ್ಪರ್ಶಿಸಿದ ದೃಶ್ಯವಾಗಿತ್ತು. ತಾಯಿಯ ಮಡಿಲಲ್ಲಿ, ತಂದೆಯ ತೋಳುಗಳಲ್ಲಿ ಆಸರೆಯಾದ ವಿದ್ಯಾರ್ಥಿಗಳ ನಿಟ್ಟುಸಿರು ಸಾರ್ಥಕತೆಯನ್ನು ಹೊರಹೊಮ್ಮಿಸಿದ ಕ್ಷಣಗಳು ಎಲ್ಲರಿಗೂ ರೋಮಾಂಚನ ಉಂಟು ಮಾಡುವಂತಿತ್ತು. ಈ ಭಾವನಾತ್ಮಕ ಕ್ಷಣಗಳು ಸಭಾಂಗಣದ ವಾತಾವರಣವನ್ನು ಕಂಗೊಳಿಸಿದವು.
ಅನಂತರ ನಡೆದ ಕಾರ್ಯಕ್ರಮದಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಶೈಕ್ಷಣಿಕ ಹಾಗೂ ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡಿ ಸನ್ಮಾನಿಸಲಾಯಿತು.
ಹಿರಿಯರು ಹಚ್ಚಿದ ಜ್ಞಾನದೀಪದಿಂದ ಕಿರಿಯರು ತಮ್ಮ ಜೀವನದ ದೀಪವನ್ನು ಹಚ್ಚಿ ಲೋಕವನ್ನು ಬೆಳಗುವ ಸಂಕೇತವಾಗಿ ಜ್ಯೋತಿಪ್ರದಾನ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಸೇರಿ ಹಿರಿದೀಪದಿಂದ ತಮ್ಮ ಕೈಯಲ್ಲಿದ್ದ ಹಣತೆಯನ್ನು ಹಚ್ಚಿ, ಸುಂದರವಾಗಿ ಅಲಂಕರಿಸಲ್ಪಟ್ಟ ರಂಗೋಲಿಯಲ್ಲಿ ಅವುಗಳನ್ನು ಸಜ್ಜುಗೊಳಿಸಿ ಬೆಳಕಿನ ಕಳೆಯನ್ನು ಹರಡಿದರು.
ಈ ರೀತಿಯಾಗಿ ಶಾರದಾ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಮಾತೃ ಪಿತೃ ವಂದನ ಹಾಗೂ ಜ್ಯೋತಿಪ್ರದಾನ ಕಾರ್ಯಕ್ರಮವು ಶಿಸ್ತು, ಸಂಸ್ಕಾರ ಮತ್ತು ವಿದ್ಯಾರ್ಥಿ-ಪೋಷಕರ ಬಂಧವನ್ನು ಮತ್ತಷ್ಟು ಬಲಪಡಿಸಿದ ಸಮಾರಂಭವಾಗಿ ಗಮನಾರ್ಹವಾಗಿದೆ.



