ಬೆಂಗಳೂರು: ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಎದುರನಿಂದ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಐದು ಮಂದಿ ಯುವಕರು ಮೃತಪಟ್ಟಿರುವ ಘಟನೆ ನೆಲಮಂಗಲದ ಜಿಂದಾಲ್ ಸಮೀಪ ತಡರಾತ್ರಿ ನಡೆದಿದೆ.
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ನಾಲ್ಕು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಒರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ದಟವರಲ್ಲಿ ಲಿಖಿತ್, ಹರ್ಷಿತ್ ಮೃತ ದೇಹ ಪತ್ತೆಯಾಗಿದ್ದು, ಇನ್ನುಳಿದ ಮೂರು ಮಂದಿಯ ಮೃತ ದೇಹದ ಗುರುತು ಪತ್ತೆ ಆಗಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.
ಐದು ಮಂದಿ ಸ್ನೇಹಿತರಿದ್ದ ಕಾರು ತುಮಕೂರು ಕಡೆಯಿಂದ ಬೆಂಗಳೂರಿನತ್ತ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಜಿಂದಾಲ್ ಬಳಿಯ ಫ್ಲೈ ಓವರ್ ಮೇಲೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿಕ್ಕಿ ಹೊಡೆದಿದೆ. ಬೆಂಗಳೂರಿನಿಂದ ಹುಬ್ಬಳಿಗೆ ಹೊರಟಿದ್ದ ಬಸ್ ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ ಮುಂಭಾಗ ಜಖಂ ಗೊಂಡಿದೆ. 43 ಮಂದಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.ಮೃತರ ಪೈಕಿ ದೊಡ್ಡಬಳ್ಳಾಪುರ ಮೂಲದ ಹರ್ಷಿತ್, ರಾಜಾನುಕುಂಟೆ ಬಳಿಯ ಸಾಯಿ ಕಾಲೇಜು ವಿದ್ಯಾರ್ಥಿ ಎಂದು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



