ಖಾಸಗಿ ವಾಹನಗಳಲ್ಲಿ ನಿಯಮ ಉಲ್ಲಂಘಿಸಿ ಬಾಡಿಗೆ, ಪರವಾನಗಿ ರದ್ದು ಮಾಡಿ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

 

 

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾರಿಗೆ ನಿಯಮಗಳನ್ನು ಉಲ್ಲಂಘನೆ ಮಾಡಿ, ಖಾಸಗಿ ವಾಹನಗಳಲ್ಲಿ ಬಾಡಿಗೆ ಮಾಡುವ ವಾಹನಗಳ ಪರವಾನಗಿ ರದ್ದುಗೊಳಿಸಬೇಕು ಎಂದು ಜಿಲ್ಲೆಯ ಎಲ್ಲ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರು ಖಡಕ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಖಾಸಗಿ ವಾಹನಗಳಲ್ಲಿ ಪ್ರವಾಸಿಗಳನ್ನು ಕರೆದೊಯ್ಯುತ್ತಿರುವ ಕುರಿತಂತೆ ಟ್ಯಾಕ್ಸಿ ಚಾಲಕರು ನೀಡಿದ ದೂರಿನ ಕುರಿತು ಪ್ರತಿಕ್ರಿಯೆ ನೀಡಿ, ಇಂತಹ ವಾಹನಗಳ ಕುರಿತು ಟ್ಯಾಕ್ಸಿ ಚಾಲಕರು ಪೋಟೊ ಸಹಿತ ದೂರು ನೀಡಿದ್ದು, ಈ ಕುರಿತು ಪರಿಶೀಲಿಸಿ, ನಿಯಮಾನುಸಾರ ದಂಡ ವಿಧಿಸಿ, ಪದೇ ಪದೇ ಇದನ್ನು ಪುನಾರಾವರ್ತನೆ ಮಾಡುತ್ತಿರುವ ವಾಹನಗಳ ಪರವಾನಗಿ ರದ್ದುಗೊಳಿಸಿ. ಜಿಲ್ಲೆಯಲ್ಲಿ ಅನಧಿಕೃತವಾಗಿ ಸಂಚರಿಸುತ್ತಿರುವ ಟ್ಯಾಕ್ಸಿ, ಆಟೋ ಮತ್ತು ಬಾಡಿಗೆ ಬೈಕ್‌ಗಳ ಕುರಿತಂತೆ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಆಟೋ ರಿಕ್ಷಾಗಳ ನಿಲ್ದಾಣ ಮತ್ತು ಟ್ಯಾಕ್ಸಿಗಳ ನಿಲ್ದಾಣದ ಕುರಿತಂತೆ ಹಾಗೂ ರಿಕ್ಷಾಗಳ ಸಂಚಾರ ವ್ಯಾಪ್ತಿ ವಿಸ್ತರಣೆ ಕುರಿತಂತೆ ಸಂಬಂಧಪಟ್ಟ ತಾಲೂಕುಗಳ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ತಹಶೀಲ್ದಾರ್ ಗಳು, ಪೊಲೀಸ್ ಅಧಿಕಾರಿಗಳು ಹಾಗೂ ಆಟೋ ಮತ್ತು ಟ್ಯಾಕ್ಷಿ ಸಂಘಟನೆಗಳು ಸಭೆ ನಡೆಸಿ ಸೂಕ್ತ ನಿರ್ಣಯ ಕೈಗೊಂಡು ಕಳುಹಿಸಿದಲ್ಲಿ ಈ ಬಗ್ಗೆ ಅಗತ್ಯ ನಿರ್ಣಯ ಕೈಗೊಳ್ಳಲಾಗುವುದು. ಜಿಲ್ಲಾಡಳಿತ ರಿಕ್ಷಾ ಮತ್ತು ಆಟೋ ಚಾಲಕರ ಎಲ್ಲಾ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲಿದ್ದು, ಎರಡೂ ಸಂಘಟನೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಗೋವಾದಲ್ಲಿ ಜಿಲ್ಲೆಯ ವಾಹನಗಳ ವಾಯು ಮಾಲಿನ್ಯ ತಪಾಸಣಾ ಪತ್ರಕ್ಕೆ ಮಾನ್ಯತೆ ನೀಡದ ಬಗ್ಗೆ ಗೋವಾ ಜಿಲ್ಲಾಧಿಕಾರಿ ಮತ್ತು ಎಸ್.ಪಿ ಗಳೊಂದಿಗೆ ಚರ್ಚಿಸಲಾಗುವುದು. ವಾಯು ಮಾಲಿನ್ಯ ತಪಾಸಣಾ ಪತ್ರವನ್ನು ಆನ್‌ಲೈನ್ ನಲ್ಲಿ ದಾಖಲಿಸುವ ಕುರಿತಂತೆ ರಾಜ್ಯ ಸಾರಿಗೆ ಆಯುಕ್ತಾಲಯದ ಗಮನಕ್ಕೆ ತರಲಾಗುವುದು, ಟ್ಯಾಕ್ಸಿಗಳಲ್ಲಿ ಅಳವಡಿಸಲಾಗುತ್ತಿರುವ ಪ್ಯಾನಿಕ್ ಬಟನ್ ಕಾರ್ಯನಿರ್ವಹಣೆ ಮತ್ತು ಇದಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಚರ್ಚಿಸಲಾಗುವುದು ಎಂದರು.

ಸಭೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಜಿಲ್ಲೆಯ ಗ್ರಾಮೀಣ ಪ್ರದೇಶದ 400 ಕ್ಕೂ ಅಧಿಕ ಮಾರ್ಗಗಳಲ್ಲಿ ಸಂಚರಿಸಲು ಅನುಮತಿ ನೀಡಿದ್ದು, ದುರ್ಗಮ ಪ್ರದೇಶದಲ್ಲಿ ಮತ್ತು ಈಗಾಗಲೇ ಗುರುತಿಸಲಾಗಿರುವ ಬ್ಲಾಕ್‌ ಸ್ಪಾಟ್ ಗಳನ್ನು ಅತ್ಯಂತ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಚಾಲಕರಿಗೆ ಸೂಚನೆ ನೀಡುವಂತೆ ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಆಟೋ ಮತ್ತು ಟ್ಯಾಕ್ಸಿ ಸಂಘಟನೆಗಳ ಪ್ರತಿನಿಧಿಗಳು ಮತ್ತು ಚಾಲಕರು, ಹೊಸದಾಗಿ ಆಟೋಗಳಿಗೆ ಪರ್ಮಿಟ್ ನೀಡುವುದನ್ನು ಕನಿಷ್ಠ 5 ವರ್ಷಗಳ ವರೆಗೆ ಸ್ಥಗಿತಗೊಳಿಸಬೇಕು, ಎಲ್.ಪಿ.ಜಿ ಮತ್ತು ಸಿ.ಎನ್.ಜಿ ವಾಹನಗಳಿಗೆ ವಾಯುಮಾಲಿನ್ಯ ಪ್ರಮಾಣ ಪತ್ರದ ಅವಶ್ಯಕತೆ ಬಗ್ಗೆ, ಪರ್ಮಿಟ್ ವ್ಯಾಪ್ತಿ ಉಲ್ಲಂಘಿಸಿ ವಾಹನ ಚಲಾಯಿಸುತ್ತಿರುವ ಬಗ್ಗೆ, ಬಾಡಿಗೆ ಬೈಕ್ ನಿಷೇಧಿಸುವುದು ಸೇರಿದಂತೆ ತಮ್ಮ ವಿವಿಧ ಸಮಸ್ಯೆಗಳ ಬಗ್ಗೆ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಜಾನ್ ಬಿ. ಮಿಸ್ಕಿತ್, ಮಲ್ಲಿಕಾರ್ಜುನಪ್ಪ ಕೊಪ್ಪರದ, ರವೀಂದ್ರ ಕೆ.ಎಸ್, ಅವಿನಾಶ ಕಾವೇರಿ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ರಿಕ್ಷಾ ಹಾಗೂ ಟ್ಯಾಕ್ಸಿ ಸಂಘಟನೆಗಳ ಪ್ರತಿನಿಧಿಗಳು ಮತ್ತು ಚಾಲಕರು ಇದ್ದರು.

  1.  

Leave a Reply

Your email address will not be published. Required fields are marked *