
ಅಂಕೋಲಾ: ಗ್ರಾಮ ಪಂಚಾಯತ್ ಗಳು ಸ್ಥಳಿಯ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಬಗೆಹರಿಸುವ ಕೇಂದ್ರಗಳಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.


ಶುಕ್ರವಾರ ಹಿರೇಗುತ್ತಿ ಗ್ರಾಮ ಪಂಚಾಯತ್ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಗ್ರಾಮದ ಜನತೆಯ ಸಮಸ್ಯೆಗಳನ್ನು ಗ್ರಾಮಗಳಲ್ಲಿಯೇ ಬಗೆಹರಿಸುವ ಉದ್ದೇಶದಿಂದ ಸರ್ಕಾರವು ಹಲವು ಸೇವೆಗಳನ್ನು ಪoಚಾಯತ್ ಮೂಲಕವೇ ನೀಡುತ್ತಿದೆ. ಸಮಸ್ಯೆಗಳ ಪರಿಹಾರಕ್ಕೆ ಪಂಚಾಯತ್ ಗೆ ಆಗಮಿಸುವ ಸಾರ್ವಜನಿಕರ ಸಮಸ್ಯೆಗಳನ್ನು ಅಧಿಕಾರಿಗಳು ತಾಳ್ಮೆಯಿಂದ ಆಲಿಸಿ, ಸ್ಪಂದಿಸಿ ಅವುಗಳನ್ನು ಬಗೆಹರಿಸಿಕೊಡಬೇಕು ಎಂದರು.
ಶಾಸಕ ದಿನಕರ ಶೆಟ್ಟಿ ಅವರು ಮಾತನಾಡಿ, ಈ ಗ್ರಾ.ಪಂ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಸೇರಿದಂತೆ ಜನರ ಬೇಡಿಕೆಗಳಿಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡಲಾಗಿದ್ದು ಈ ಭಾಗದ ಕಾಲೇಜಿನ ಕಟ್ಟಡಕ್ಕೂ ಅನುದಾನ ಒದಗಿಸಿದೆ. ಪಂಚಾಯತ್ ಕಟ್ಟಡಕ್ಕೆ ಹೆಚ್ಚುವರಿ ಅನುದಾನ ಒದಗಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ನಾರಾಯಣ ನಾಯ್ಕ, ಉಪಾಧ್ಯಕ್ಷೆ ವೆಂಕಮ್ಮ ಹರಿಕಂತ್ರ, ತಹಶೀಲ್ದಾರ್ ಕೃಷ್ಣ ಕಾಮಕರ್, ತಾಲ್ಲೂಕು ಪಂಚಾಯಿತಿ ಇಒ ರಾಜೇಂದ್ರ ಭಟ್, ಪಂಚಾಯತ್ ಎಲ್ಲಾ ಸದಸ್ಯರು ಇದ್ದರು.

