
ಬೆಳಗಾವಿ: ಇಲ್ಲಿನ ನಗರದ ಶ್ರೀನಗರದಲ್ಲಿರುವ ಜಿಲ್ಲಾ ಬಾಲಭವನದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಬಾಕ್ಸ್ ಕ್ರಿಕೆಟ್ ಮೈದಾನ ಉದ್ಘಾಟನಾ ಸಮಾರಂಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಬೌಲಿಂಗ್ ಗೆ ಇಳಿದರು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಬ್ಯಾಟಿಂಗ್ ಮಾಡುವ ಮೂಲಕ ಅಂಕಣ ಉದ್ಘಾಟಿಸಿದರು.
ಸಚಿವೆ ಹೆಬ್ಬಾಳಕರ ಅವರು ಎಸೆದ ಬೌಲಿಂಗ್ ಗೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಉತ್ತರ ಶಾಸಕ ಆಸಿಫ್ (ರಾಜು) ಸೇಠ್ ಕ್ಲೀನ್ ಬೋಲ್ಡ್ ಆದರು. ಈ ದೃಶ್ಯವನ್ನು ಅಲ್ಲಿ ನೆರೆದಿದ್ದ ಎಲ್ಲರೂ ಕಣ್ಣು ತುಂಬಿಕೊಂಡರು.


ನಂತರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿ, ಬಾಲಭವನದಿಂದ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಯೋಜನೆ ಹಮ್ಮಿಕೊಂಡಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಅನುಕೂಲ ಆಗುವಂತೆ ಬಾಕ್ಸ್ ಕ್ರಿಕೆಟ್ ಮೈದಾನ ನಿರ್ಮಾಣ ಮಾಡಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಅವರು ಆಸಕ್ತಿ ವಹಿಸಿ ಈ ಯೋಜನೆ ರೂಪಿಸಿದ್ದಾರೆ. ಬಾಲಭವನದಿಂದ, ಜಿಲ್ಲಾ ಪಂಚಾಯಿತಿಯಿಂದ ಹಾಗೂ ಶಾಸಕ ಆಸೀಫ್ ಸೇಠ್ ಅವರ ಶಾಸಕರ ಅನುದಾನದಿಂದ ಹಣ ವಿನಿಯೋಗಿಸಲಾಗಿದೆ. ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕ್ರಿಕೆಟ್ ತರಬೇತಿ ನೀಡಿ ಪ್ರತಿಭಾವಂತರನ್ನು ಮುಂದಿನ ಹಂತಕ್ಕೆ ಕಳಿಸಲಾಗುವುದು. 5 ಅಂಗವಿಕಲರಿಗೂ ಅವಕಾಶ ನೀಡಲಾಗುವುದು ಎಂದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ, ಉತ್ತರ ಶಾಸಕ ಆಸಿಫ್ (ರಾಜು) ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮುಡಾ ಮಾಜಿ ಅಧ್ಯಕ್ಷ ಲಕ್ಷಣರಾವ್ ಚಿಂಗಳೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಚೇತನಕುಮಾರ್, ಸಿಡಿಪಿಒ ಸುಮಿತ್ರಾ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಇದ್ದರು.


