
ಮಂಗಳೂರು: ಇಲ್ಲಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ ಎ.ಜೆ. ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ವತಿಯಿಂದ ಇದೇ 7 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರಿಗೆ ಕ್ಯಾನ್ಸರ್ ರೋಗಿಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಕೂದಲು ದಾನ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರವು ಎ.ಜೆ. ಆಸ್ಪತ್ರೆಯ 2 ನೇ ಮಹಡಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಕಾರ್ಯಕ್ರಮವನ್ನು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಹಾಗೂ ಕಪೆಲಿ ಸ್ಯಾಲೂನ್ ಅವರ ಆಶ್ರಯದಲ್ಲಿ ಆಯೋಜಿಸಲಾಗಿದ್ದು, ಕಿಮೋಥೆರಪಿ ಚಿಕಿತ್ಸೆಯಿಂದ ಕೂದಲು ಕಳೆದುಕೊಳ್ಳುವ ಕ್ಯಾನ್ಸರ್ ರೋಗಿಗಳಿಗೆ ಬೆಂಬಲ ನೀಡುವುದು ಕೂದಲು ದಾನ ಶಿಬಿರದ ಉದ್ದೇಶ ಆಗಿದೆ. ಶಿಬಿರದಲ್ಲಿ ದಾನವಾಗಿ ಪಡೆಯುವ ಕೂದಲಿನಿಂದ ಕ್ಯಾನ್ಸರ್ ರೋಗಿಗಳಿಗೆ ವಿಗ್‌ಗಳನ್ನು ತಯಾರಿಸಲಾಗುತ್ತದೆ. ಇದರಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆತ್ಮವಿಶ್ವಾಸ ಹಾಗೂ ಭಾವನಾತ್ಮಕ ಆರೋಗ್ಯವನ್ನು ಮರು ಸ್ಥಾಪಿಸಲು ಸಹಕಾರಿ ಆಗಲಿದೆ. ಈ ಮಾನವೀಯ ಪ್ರಯತ್ನವು ವೈದ್ಯಕೀಯ ಚಿಕಿತ್ಸೆಯ ಹೊರತಾಗಿ ಕ್ಯಾನ್ಸರ್ ಆರೈಕೆಯ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸಮುದಾಯದ ಸಕ್ರೀಯ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶ ಈ ಕಾರ್ಯಕ್ರಮದ್ದು ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳು, ವೃತ್ತಿಪರರು ಹಾಗೂ ಸಾರ್ವಜನಿಕರು ಈ ಮಹತ್ವದ ಸೇವಾ ಕಾರ್ಯದಲ್ಲಿ ಭಾಗವಹಿಸಿ ಕ್ಯಾನ್ಸರ್ ರೋಗಿಗಳ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆ ಎಲ್ಲರೂ ಕಾರಣರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಎ.ಜೆ. ಕ್ಯಾನ್ಸರ್ ಇನ್‌ಸ್ಟಿಟ್ಯೂಟ್, ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸಂಪರ್ಕ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


