
ಜೋಯಿಡಾ: ಉತ್ತರ ಕನ್ನಡ ಜಿಲ್ಲೆಯ ಜೋಯಡಾ ತಾಲ್ಲೂಕಿನ ಉಳವಿ ಚೆನ್ನಬಸವೇಶ್ವರ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ಜಾತ್ರೆಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರ ಗಣ ಹರಿದು ಬಂದಿದ್ದಿತ್ತು. ಈ ಭಾಗದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ನಡೆವ ಜಾತ್ರೆಗೆ ಎತ್ತಿನ ಗಾಡಿ, ಟ್ರ್ಯಾಕ್ಟರ್ ಗಳು ಪರಿವಾರ ಸಮೇತರಾಗಿ ಜಾತ್ರೆಗೆ ಬರುತ್ತಾರೆ.
ಭಾರತ ಹುಣ್ಣಿಮೆ ಮಘಾ ನಕ್ಷತ್ರದ ಶುದ್ದ ಪಾಡ್ಯ ಘಳಿಗೆಯಲ್ಲಿ ನಡೆದ ರಥೋತ್ಸವಕ್ಕೆ ಲಕ್ಷಾಂತರ ಜನರು ಸಾಕ್ಷಿ ಆಗಿದ್ದರು. ಭಕ್ತರ ಜಯಘೋಷಗಳು ಜಾತ್ರೆಗೆ ಕಳೆ ಕಟ್ಟಿತು.

ರಥಬೀದಿಯಲ್ಲಿ ರಥವನ್ನು ಎಳೆಯುವ ವೇಳೆ ಸಾವಿರಾರೂ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಜಯಘೋಷಗಳನ್ನು ಹಾಕುವ ಮೂಲಕ ಭಕ್ತಿ ಮೆರೆದರು. ಜಾತ್ರೆಗೆ ಬಂದಿದ್ದ ಭಕ್ತರು ಪೂಜೆಗಳನ್ನು ಸಲ್ಲಿಸಿದರು. ಜಾತ್ರೆಗೆ ವಿಜಯಪುರ, ಬಾಗಲಕೋಟೆ, ಜಮಖಂಡಿ, ಹಾವೇರಿ, ಬೆಳಗಾವಿ, ಕೊಪ್ಪಳ, ಗೋವಾ, ಮಹಾರಾಷ್ಟ್ರಗಳಿಂದಲೂ ಭಕ್ತರು ಬಂದಿದ್ದರು.
ಈ ಬಾರಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಜಾತ್ರಾ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿದ್ದು ಗಮನ ಸೆಳೆಯಿತು. ಟ್ರಾಫಿಕ್ ಸಮಸ್ಯೆ ಕಿರಿ ಕಿರಿಯನ್ನುಂಟು ಮಾಡಿದರೂ ಡಿವೈಎಸ್ಪಿ ಶಿವಾನಂದ ಮದರಖಂಡಿ ಸ್ಥಳದಲ್ಲೇ ಇದ್ದು, ಮಾರ್ಗದರ್ಶನ ನೀಡಿ, ಪೊಲೀಸರು ಸಂಯಮದಿಂದ ವರ್ತಿಸಿ, ನಿಯಂತ್ರಿಸಿ ಶಾಂತಿ ಸುವ್ಯವಸ್ತೆ ಕಾಪಾಡಿದರು.
ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಉಳವಿ ಚೆನ್ನ ಬಸವೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಸಂಜಯ ಕಿತ್ತೂರು ಮತ್ತು ಪದಾಧಿಕಾರಿಗಳು ಭಕ್ತಾದಿಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿದ್ದರು.


