
ಮಂಗಳೂರು: ಕಮಿಷನರ್ ವ್ಯಾಪ್ತಿಯ ಉರ್ವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 27 ವರ್ಷ ತಲೆಮರೆಸಿಕೊಂಡಿದ್ದ ದಂಡುಪಾಳ್ಯ ಗ್ಯಾಂಗ್ ಆರೋಪಿಯನ್ನು ಬಂಧನ ಮಾಡುವಲ್ಲಿ ಉರ್ವ ಠಾಣೆ ಪೊಲೀಸರ ತಂಡವು ಯಶಸ್ವಿ ಆಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಶನಿವಾರ ತಿಳಿಸಿದ್ದಾರೆ.
ಆರೋಪಿ ಚಿಕ್ಕ ಹನುಮಂತಪ್ಪ, ಹೆಸರು, ವಿಳಾಸ ಬದಲಿಸಿಕೊಂಡು ಆಂಧ್ರ ಪ್ರದೇಶದಲ್ಲಿ ಬೇರೆ ಕುಟುಂಬ ಮಾಡಿಕೊಂಡು ಮಕ್ಕಳ ಜತೆಗೆ ನೆಲೆಸಿದ್ದ. ಜಿಲ್ಲೆಯಲ್ಲಿ ದೀರ್ಘಾವಧಿಯ ಪ್ರಕರಣಗಳಲ್ಲಿ ತಲೆಮರೆಸಿಕೊಂಡ ಆರೋಪಿಗಳ ಪತ್ತೆ ಕಾರ್ಯಾಚರಣೆ ಅಭಿಯಾನದ ವೇಳೆ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಉರ್ವ ಠಾಣೆ ಪೊಲೀಸರು, ಅದರಲ್ಲೂ ಮುಖ್ಯವಾಗಿ ಮಹಿಳಾ ಕಾನ್‌ಸ್ಪೆಬಲ್ ಲಲಿತಾ ಅವರು ಕಷ್ಟಪಟ್ಟು ನಾಲ್ಕು ತಿಂಗಳು ಈ ಪ್ರಕರಣಕ್ಕೆ ಒತ್ತು ನೀಡಿ ಶ್ರಮಿಸಿದ್ದಾರೆ. ವಿವಿಧ ಠಾಣೆ, ಕೋರ್ಟ್,ಕಚೇರಿಗಳಿಗೆ ಭೇಟಿ ನೀಡುವ ಸಂದರ್ಭ ಕೋರ್ಟ್ ದಾಖಲೆವೊಂದರಲ್ಲಿ ಈತ ಹೆಸರು ಬದಲಾಯಿಸಿಕೊಂಡಿರುವುದನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಊರಿನವರನ್ನು ಸಂಪರ್ಕಿಸಿ ತಂಡದೊಂದಿಗೆ ತೆರಳಿ ಉರ್ವ ಪೊಲೀಸ್ ತಂಡ ಆರೋಪಿ ಬಂಧಿಸುವಲ್ಲಿ ಯಶಸ್ವಿ ಆಗಿದೆ ಎಂದರು.
1997 ರಲ್ಲಿ ಉರ್ವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಲವು ತನಿಖೆ ನಡೆದು ದಂಡುಪಾಳ್ಯದ ಕೃತ್ಯ ಎಂದು ಪತ್ತೆ ಆಗಿತ್ತು. ದಂಡುಪಾಳ್ಯ ಗ್ಯಾಂಗ್ ಸದಸ್ಯ, ಆರೋಪಿ ಚಿಕ್ಕ ಹನುಮಂತಪ್ಪ ಎಂಬುವವರು ತಲೆಮರೆಸಿಕೊಂಡಿದ್ದ. 27 ವರ್ಷಗಳ ನಂತರ ಉರ್ವ ಠಾಣೆಯ ಪೊಲೀಸರಿಂದ ಪತ್ತೆ ಮಾಡಿ ಬಂಧನ ಮಾಡಿರುವ ಆರೋಪಿಯನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದರು.
ದಂಡುಪಾಳ್ಯ ಗ್ಯಾಂಗ್ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಬಂಧಿತ ಚಿಕ್ಕ ಹನುಮಂತಪ್ಪ ವಿರುದ್ಧ 8 ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ. ಇದೀಗ ಆತನ ಬಂಧನದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಎಲ್ಲ ಪೊಲೀಸ್ ಠಾಣೆಗಳಿಗೆ ಸಂಪರ್ಕ ಮಾಡಲಾಗಿದೆ. ಎಲ್ಲ ಪ್ರಕರಣಗಳಲ್ಲೂ ತನಿಖೆ ಯಾವ ಹಂತದಲ್ಲಿದೆ ಎಂದು ಪರಿಶೀಲಿಸಿ ಮತ್ತೆ ವಿಚಾರಣೆ ನಡೆಸಬಹುದಾಗಿದೆ. ದಂಡುಪಾಳ್ಯದ ವಿರುದ್ಧದ ಕೆಲ ಪ್ರಕರಣಗಳಲ್ಲಿ ಕೆಲ ಆರೋಪಿಗಳಿಗೆ ಖುಲಾಸೆ ಆಗಿದ್ದು, ಬಂಧಿತ ಆರೋಪಿ ಖುಲಾಸೆಗೊಂಡಿಲ್ಲ. ಏನಾದರೂ ತಪ್ಪುಗಳಿದ್ದಲ್ಲಿ ಅದನ್ನು ಸರಿಪಡಿಸಿಕೊಂಡು ವಿಚಾರಣೆ ಮುಂದುವರೆಸಲಾಗುವುದು ಎಂದರು.

ಗ್ಯಾಂಗ್‌ನಲ್ಲಿ ಉರ್ವ ಪ್ರಕರಣಕ್ಕೆ ಸಂಬಂಧಿಸಿ ದಂಡುಪಾಳ್ಯದ ಎಂಟು ಮಂದಿ ಭಾಗಿ ಆಗಿದ್ದು, ಆರು ಮಂದಿಯ ಬಂಧನ ಆಗಿತ್ತು. ಇಬ್ಬರ ಮೇಲೆ ತಲೆಮರೆಸಿಕೊಂಡ ಆರೋಪ ಇದ್ದು, ಇದೀಗ ಒಬ್ಬರನ್ನು ಬಂಧಿಸಲಾಗಿದೆ. ಪ್ರಕರಣವನ್ನು ಬೇಧಿಸಿ, ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿ ಆಗಿರುವ ಉರ್ವ ಪೊಲೀಸ್ ಠಾಣೆಯ ತಂಡವನ್ನು ಅಭಿನಂದಿಸಲಾಗುವುದು ಎಂದರು.
ಡಿಸಿಪಿಗಳಾದ ಮಿಥುನ್, ರವಿಶಂಕರ್, ಉರ್ವ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಶ್ಯಾಂಸುಂದರ್, ಪಿಎಸ್ ಐಗಳಾದ ಮಂಜುಳಾ ಸೇರಿದಂತೆ ಸಿಬ್ಬಂದಿ ಇದ್ದರು.
ಆರೋಪಿ ಆಂಧ್ರದಲ್ಲಿ ಇದ್ದರು ಬಿಡದ ಪೊಲೀಸರು
ಬಂಧಿತ ಆರೋಪಿ ಚಿಕ್ಕ ಹನುಮಂತಪ್ಪ 1997 ರಲ್ಲಿ ಜೋಡಿ ಕೊಲೆ ಪ್ರಕರಣವಲ್ಲದೆ, 2000 ದಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿ ಆಗಿರುವುದು ಪತ್ತೆ ಆಗಿದೆ. ದಂಡುಪಾಳ್ಯ ಗ್ಯಾಂಗ್ ಅಪರಾಧ ಕೃತ್ಯಗಳ ಬಗ್ಗೆ ವಿಚಾರಣೆ ನಡೆದಾಗ 8 ಪ್ರಕರಣಗಳಲ್ಲಿ ಶಿಕ್ಷೆ ಆಗಿತ್ತು. ಕೆಲವು ಪ್ರಕರಣಗಳು ದೃಢಗೊಂಡು ಜೀವಾವಧಿ ಶಿಕ್ಷೆ ಆಗಿದೆ. ಕೆಲವು ಪ್ರಕರಣಗಳಲ್ಲಿ ಮರು ತನಿಖೆಗೆ ಕಳುಹಿಸಿದಾಗ ಕೆಲವರು ಖುಲಾಸೆಗೊಂಡಿದ್ದಾರೆ. ಈತ ಯಾವುದೇ ರೀತಿ ವಿಚಾರಣೆಗೆ ಹಾಜರಾಗದ ಕಾರಣ ಮತ್ತೆ ಆರೋಪಿಯನ್ನು ವಿಚಾರಣೆಗೆ ಒಳಪಡಿಸಬೇಕಾಗುತ್ತದೆ ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದರು.


