
ಮಂಗಳೂರು: ಪುತ್ತೂರಿನ ಕೃಷ್ಣ ಜೆ. ರಾವ್, ಯುವತಿಯನ್ನು ಪ್ರೀತಿಸಿ ಮಗು ಕರುಣಿಸಿ ಬಳಿಕ ಮದುವೆಗೆ ನಿರಾಕರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಮನೆಯವರನ್ನು ಸಂಧಾನಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಇದೇ 24 ರಂದು ನಿಗದಿ ಆಗಿದ್ದ ಮಗುವಿನ ನಾಮಕರಣ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಇದೇ 31 ರೊಳಗೆ ಮದುವೆ ನಡೆಯದೇ ಇದ್ದಲ್ಲಿ ಫೆ. 7 ರಂದು ನಾಮಕರಣ ಕಾರ್ಯಕ್ರಮ ನಡೆಯಲಿದೆ. ನಂತರ ಯಾವುದೇ ಸಂಧಾನ ಇಲ್ಲ ಎಂದು ಹಿಂದುಳಿದ ವರ್ಗಗಳ ಅಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ 24 ರಂದು ಕಲ್ಲಡ್ಕದಲ್ಲಿ ಮಗುವಿಗೆ ನಾಮಕರಣಕ್ಕೆ ದಿನವನ್ನು ನಿಗದಿ ಮಾಡಲಾಗಿತ್ತು. ಆದರೆ, ಮಗುವಿನ ಅಜ್ಜಿ ನಮಿತಾ ಅವರಿಗೆ ಆಚಾರ್ಯ ಸಮುದಾಯದ ಉಡುಪಿ ಒಕ್ಕೂಟದ ಪದಾಧಿಕಾರಿ ಮಧು ಆಚಾರ್ಯ ಎಂಬುವವರು ಕರೆ ಮಾಡಿ ಕೃಷ್ಣ ಜೆ. ರಾವ್ ಅವರ ಕುಟುಂಬ ಮದುವೆಗೆ ಒಪ್ಪಿರುವುದಾಗಿ ತಿಳಿಸಿದ್ದಾರೆ. ಸ್ವಲ್ಪ ಕಾಲಾವಕಾಶ ಕೇಳಿದ್ದು, ತೊಟ್ಟಿಲು ಕಾರ್ಯಕ್ರಮ ಬೇಡ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪಿ ನಾಮಕರಣದ ದಿನವನ್ನು ಬದಲಾಯಿಸಲಾಗಿದೆ. ಹಿಂದೆ ಆರು ತಿಂಗಳು ನಮ್ಮನ್ನು ದಾರಿ ತಪ್ಪಿಸಲಾಗಿದ್ದು, ಈ ಬಾರಿ ಹಾಗೇ ಆಗಲು ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ತಿಳಿಸಿದರು.

ಸಂಧಾನಕ್ಕೆ ನಮಿತಾ ಮತ್ತು ಆಕೆಯ ಮಗಳು ಮಾತ್ರ ಬರಬೇಕು ಎಂಬ ಷರತ್ತು ಹಾಕಿದ್ದು, ಈ ಷರತ್ತು ನಾವು ಒಪ್ಪಲ್ಲ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಅವರು ಸಂಧಾನಕ್ಕೆ ಹೋದಾಗ ಏನು ಬೇಕಾದರೂ ಘಟನೆ ಸಂಬವಿಸಬಹುದು ಎಂಬ ಅನುಮಾನವು ಇದೇ. ಸಂಧಾನಕ್ಕೆ ನಾನು ಹಾಗೂ ನಂಜುಂಡಿ ಅವರು ಹೋಗಲ್ಲ. ಸಂಧಾನ ಪುತ್ತೂರು ಪೊಲೀಸ್ ಠಾಣೆಯಲ್ಲಿ ಆಗಲಿ ಅಥವಾ ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಅವರ ಬಳಿ ನಡೆಯಲಿ ಎಂಬ ಬೇಡಿಕೆ ನಮ್ಮದು ಎಂದು ತಿಳಿಸಿದ್ದಾರೆ.
ಕೃಷ್ಣ ಜೆ. ರಾವ್ ಕುಟುಂಬ ಮದುವೆಗೆ ಒಪ್ಪಲ್ಲ ಎಂದು ಪುತ್ತೂರು ಶಾಸಕರೂ ಹೇಳಿದ್ದಾರೆ. ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿ ಇದ್ದು ಪ್ರಕರಣದಿಂದ ಹೊರ ಬರುವುದಕ್ಕೆ ನಾಟಕ ನಡೆಸುವ ಭಾಗವು ಇದಾಗಿದೆ ಎಂಬ ಶಂಕೆ ಇದೆ. ಹಿಂದೆ ಕೂಡ ಮಗುವನ್ನು ಆಶ್ರಮಕ್ಕೆ ನೀಡಬೇಕು, ಪ್ರಕರಣ ವಾಪಸ್ ಪಡೆಯಬೇಕು, ಮದುವೆ ನಂತರ ವಿಚ್ಛೇದನ ಪಡೆಯುವಂತೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದರು.
ಮದುವೆ ಕಾನೂನು ಬದ್ಧವಾಗಿ ಆನ್ ಲೈನ್ ಅಥವಾ ಯಾವುದೇ ರೀತಿಯಲ್ಲಿಯೂ ಆಗಲಿ. ಯಾವುದೇ ರೀತಿಯಲ್ಲಿ ಈ ಪ್ರಕರಣ ಸುಖಾಂತ್ಯ ಆಗಬೇಕು, ಇಬ್ಬರ ತಪ್ಪಿಗೂ ಪ್ರಾಯಶ್ಚಿತ ಆಗಬೇಕು. ಮದುವೆಯಾಗಿ ಒಂದಾಗದೇ ಇದ್ದರೆ ಕಾನೂನು ಪ್ರಕಾರ ವಿಚ್ಛೇದನ ಪಡೆಯಲಿ. ಯಾವುದೇ ಗೋಷ್ಠಿ ಅಥವಾ ಸಭೆಗಳಿಗೆ ಹೋಗಬಾರದು ಎಂಬ ಷರತ್ತು ವಿಧಿಸಿದ್ದರಿಂದ ನಮಿತಾ ಅವರು ಭಾಗವಹಿಸಿಲ್ಲ. ಜ.31ರೊಳಗೆ ಮದುವೆ ಆಗದಿದ್ದರೆ ಮುಂದಕ್ಕೆ ಸಂಧಾನವೇ ಇಲ್ಲ, ಫೆ.7 ರಂದು ಅದ್ಧೂರಿ ಆಗಿ ಮಗುವಿನ ನಾಮಕರಣ ನಡೆಯಲಿದೆ. ಜತೆಗೆ ಕಾನೂನಾತ್ಮಕ ಹೋರಾಟ ಮುಂದುವರೆಯಲಿದೆ ಎಂದರು.


