
ಮಂಗಳೂರು: ಉಡುಪಿ ಪರ್ಯಾಯ ಮಹೋತ್ಸವದ ವೇಳೆ ಧ್ವಜ ಹಿಡಿದು ಮೆರವಣಿಗೆಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಅವರ ಮೇಲೆ ಅನಾವಶ್ಯಕವಾಗಿ ಆರೋಪ ಮಾಡಿ, ತೊಂದರೆ ಕೊಟ್ಟು ಅನಗತ್ಯ ವಿವಾದ ಸೃಷ್ಠಿ ಮಾಡುತ್ತಿರುವುದು ಖಂಡನೀಯ. ಇದು ಕಾಂಗ್ರೆಸ್ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಪ್ರಕಟಣೆಯಲ್ಲಿ ಆಕ್ರೋಶ ಹೊರಹಾಕಿದರು.
ಉಡುಪಿಯಲ್ಲಿ ಈಚೆಗೆ ನಡೆದ ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಅವರು ಸಂಪ್ರದಾಯದಂತೆ ಧ್ವಜ ಹಿಡಿದು ಮೆರವಣಿಗೆಗೆ ಚಾಲನೆ ನೀಡಿದ ವಿಚಾರವನ್ನು ಆಧಾರ ಮಾಡಿಕೊಂಡು ಕೆಲವು ಕಾಂಗ್ರೆಸ್ ನಾಯಕರು ಅನಗತ್ಯ ವಿವಾದ ಸೃಷ್ಟಿಸುತ್ತಿರುವುದು ವಿಷಾದನೀಯ ಎಂದು ತಿಳಿಸಿದ್ದಾರೆ.
ಹಿಂದೂ ದೇವಾಲಯಗಳ ಉತ್ಸವಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಆಧಾರದಲ್ಲೇ ನಡೆಯುತ್ತವೆ. ಇಂತಹ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಹುದ್ದೆಯಲ್ಲಿ ಇರುವ ಅಧಿಕಾರಿಗಳು ಸಂಪ್ರದಾಯಕ್ಕೆ ಗೌರವ ಸೂಚಿಸಿ ಭಾಗವಹಿಸುವುದು ಯಾವುದೇ ಹೊಸ ವಿಷಯವಲ್ಲ. ಆದರೆ, ಸಂಪ್ರದಾಯದಂತೆ ನಡೆದ ಒಂದು ಕ್ರಮದ ಬಗ್ಗೆ ಮಾತ್ರ ವಿರೋಧ ವ್ಯಕ್ತ ಆಗುತ್ತಿರುವುದು ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿ ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.

ಯಾವುದೇ ದೇವಾಲಯದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಇಲ್ಲದಿದ್ದರೆ ಶಿಷ್ಟಾಚಾರ ಉಲ್ಲಂಘನೆ ಎಂಬ ಆರೋಪ ಮಾಡುವವರೇ, ಅದೇ ವೇದಿಕೆಯಲ್ಲಿ ಭಾಗವಹಿಸಿ ಗೌರವ ಸ್ವೀಕರಿಸುವುದನ್ನು ಸಹಜವೆಂದು ಪರಿಗಣಿಸುತ್ತಾರೆ. ಇಂತಹ ಸಂದರ್ಭದಲ್ಲಿ, ಸಂಪ್ರದಾಯದಂತೆ ಅಧಿಕಾರಿಯೊಬ್ಬರು ಧ್ವಜ ಹಿಡಿದು ಚಾಲನೆ ನೀಡಿರುವುದನ್ನು ಪ್ರಶ್ನಿಸುವುದು ಕಾಂಗ್ರೆಸ್‌ನ ಹೀನ ಮನಃಸ್ಥಿತಿಯನ್ನು ಬಿಂಬಿಸುತ್ತದೆ ಎಂದರು.
ಜವಾಬ್ದಾರಿ ಸ್ಥಾನದಲ್ಲಿರುವ ಮಹಿಳಾ ಅಧಿಕಾರಿಯೊಬ್ಬರು ನಾಡಿನ ಸಂಸ್ಕೃತಿ ಮತ್ತು ಜನಪರ ಧಾರ್ಮಿಕ ಉತ್ಸವಕ್ಕೆ ಗೌರವ ಸೂಚಿಸಿದ ಕಾರಣಕ್ಕಾಗಿ ಟೀಕೆಗೆ ಒಳಗಾಗುವುದು ಸಮಂಜಸವಲ್ಲ. ಇಂತಹ ವಿಚಾರಗಳಲ್ಲಿ ರಾಜಕೀಯ ಲಾಭಕ್ಕಾಗಿ ಅಧಿಕಾರಿಗಳ ಮೇಲೆ ಒತ್ತಡ ತರುವ ಪ್ರಯತ್ನವನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.
ನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಜನರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವ ಮನೋಭಾವ ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಇರಬೇಕು. ಈ ಹಿನ್ನೆಲೆಯಲ್ಲಿ, ಇಂತಹ ವಿಷಯಗಳನ್ನು ಅನಗತ್ಯ ರಾಜಕೀಯ ವಿವಾದಗಳಾಗಿ ರೂಪಿಸುವುದನ್ನು ಎಲ್ಲರೂ ತ್ಯಜಿಸಬೇಕು ಎಂದು ಒತ್ತಾಯಿಸಿದರು.


