
ಕುಮಟಾ: ಶಾಲಾ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ಓಮ್ನಿ ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ನಿಂತಿದ್ದ ಬೊಲೆರೊಗೆ ಡಿಕ್ಕಿ ಹೊಡೆದು ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಹಳೆಯ ಬಸ್ ನಿಲ್ದಾಣದ ಸಮೀಪ ನಡೆದಿದೆ.

ಕುಮಟಾ ಡಾ. ಎ.ವಿ. ಬಾಳಿಗಾ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ. ಓಮ್ನಿಯಲ್ಲಿ ಪ್ರಯಾಣಿಸುತ್ತಿದ್ದ ಐದು ಮಂದಿ ವಿದ್ಯಾರ್ಥಿಗಳಲ್ಲಿ 4 ಮಂದಿಗೆ ಗಾಯಗಳಾಗಿದ್ದು, ಚಾಲಕ ಸೇರಿ 5 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ನಾಲ್ಕು ಮಂದಿ ವಿದ್ಯಾರ್ಥಿಗಳಿಗೆ ಪೆಟ್ಟುಗಳಾಗಿದ್ದು, ಓಮ್ನಿ ಚಾಲಕನಿಗೂ ಗಾಯಗಳಾಗಿವೆ. ಅಪಘಾತದಲ್ಲಿ ಶಾಲಾ ವಾಹನವು ಜಖಂಗೊಂಡಿದೆ. ಘಟನೆಯ ನಂತರ ಗಾಯಗೊಂಡವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಕುಮಟಾ ಪೊಲೀಸರು ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.


