
ಮಂಗಳೂರು: ಕ್ರೀಡೆಯಲ್ಲಿ ವಯಸ್ಸಿನ ತಾರತಮ್ಯ ಇರಲ್ಲ. ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆ ಅತೀ ಅಗತ್ಯ ಎಂದು ದ.ಕ. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಪ್ರದೀಪ್ ಡಿಸೋಜ ಅವರು ಹೇಳಿದರು.
ದಕ್ಷಿಣ ಕನ್ನಡ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ದ.ಕ., ಉಡುಪಿ ಹಾಗೂ ಕೊಡಗು ಅಂತರ ಜಿಲ್ಲಾ ಮಟ್ಟದ ‘ಮಾಸ್ಟರ್ಸ್ ಅಥ್ಲೆಟಿಕ್ ಕೂಟವನ್ನು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯರ ಜತೆ ಕಿರಿಯರು ಕೂಡ ಅಂಗಳಕ್ಕೆ ಇಳಿಯಬೇಕು. ಮಕ್ಕಳಿಗೆ ಆದಷ್ಟು ಪ್ರೇರಣೆ ನೀಡಿ ಮೈದಾನಕ್ಕೆ ಕರೆತರುವ ನಿಟ್ಟಿನಲ್ಲಿ ಹಿರಿಯರು ಗಮನ ಹರಿಸಬೇಕು. ಕ್ರೀಡೆಯಲ್ಲಿ ಗೆಲುವು ಮುಖ್ಯವಲ್ಲ, ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಬೇಕು. ಸ್ಪರ್ಧಾತ್ಮಕ ಮನೋಭಾವದಿಂದ ಕ್ರೀಡೆಯಲ್ಲಿ ತೊಡಗಬೇಕು ಎಂದರು.
ಜಿಲ್ಲಾ ಅಸೋಸಿಯೇಷನ್ 18 ವರ್ಷಗಳಿಂದ ನಿರಂತರವಾಗಿ ಹಿರಿಯರ ಕ್ರೀಡಾಕೂಟ ಆಯೋಜಿಸುತ್ತಿದೆ. ಇದೇ ಮೊದಲ ಬಾರಿಗೆ ಮೂರು ಜಿಲ್ಲೆಗಳನ್ನು ಸೇರ್ಪಡೆ ಮಾಡಿ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಕ್ರೀಡಾಕೂಟವನ್ನು ಸಂಘಟಿಸುವುದು ಅತ್ಯಂತ ಕಷ್ಟದ ಕೆಲಸ ಆದರೂ, ಜಿಲ್ಲಾ ಸಂಘಟನೆ ಅತ್ಯಂತ ಯಶಸ್ವಿಯಾಗಿ ಆಯೋಜನೆ ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿದ ಮಹಿಳಾ ಉದ್ಯಮಿ ವಿಜಯಲಕ್ಷ್ಮಿ ಮಲ್ಲಿ ಅವರು ಮಾತನಾಡಿ, ಹಿರಿಯರ ಕ್ರೀಡಾಕೂಟದಿಂದ ಎಲ್ಲರೂ ಪ್ರೇರೇಪಣೆ ಹೊಂದಬೇಕು. ಹಿರಿಯರ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬಂದಿರುವ ಸ್ಪರ್ಧಿಗಳ ಹುಮ್ಮಸ್ಸು ಎಲ್ಲರಿಗೂ ಮಾದರಿ ಎಂದರು.
ಅಸೋಸಿಯೇಶನ್ ಅಧ್ಯಕ್ಷ ಜಗದೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಬಿಎಸ್‌ಬಿ ಹಿತರಕ್ಷಣಾ ವೇದಿಕೆ ಟ್ರಸ್ಟಿ ರಮಾನಾಥ್ ಎನ್. ಪೈ, ಮಹಿಳಾ ಸಮಾಜ ಮತ್ತು ಭಗಿನಿ ಸಮಾಜ ಸದಸ್ಯೆ ಕ್ಷಪಾ ಎ. ಶೆಟ್ಟಿ, ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿ ಖಜಾಂಚಿ ಚಂಚಲಾಕ್ಷಿ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಚಂದ್ರಕಲಾ ಡಿ.
ರಾವ್, ಸಾಮಾಜಿಕ ಕಾರ್ಯಕರ್ತೆ ಆಶಾ ನಾಗರಾಜ್, ಪ್ರಮುಖರಾದ ಕರುಣಾಕರ ರೈ ಮತ್ತು ತಾರಾನಾಥ ಶೆಟ್ಟಿ, ಅಸೋಸಿಯೇಷನ್ ಕಾರ್ಯದರ್ಶಿ ಪ್ರಚೇತ್, ಗೌರವ ಸಲಹೆಗಾರ ರವಿರಾಜ್, ಸಹ ಕಾರ್ಯದರ್ಶಿ ಸುನೀತಾ ಹರೀಶ್, ಪದಾಧಿಕಾರಿಗಳಾದ ಚಂದ್ರಹಾಸ ಅಂಚನ್, ಮೋಹನ್ ವಾಸ್ ಶೆಟ್ಟಿ,ಎಚ್. ಎಂ.ರವಿ ಇದ್ದರು.
ಕಾರ್ಯಕ್ರಮವನ್ನು ಭಾಗಿರಥಿ ರೈ ಅವರು ನಿರೂಪಿಸಿದರು.


