
ಮಂಗಳೂರು: ಎಂಸಿಸಿ ಬ್ಯಾಂಕ್ ನವೀಕೃತ ಕಂಕನಾಡಿ ಶಾಖೆಯನ್ನು ಇಲ್ಲಿನ ಪಂಪ್ವೆಲ್ ರಸ್ತೆಯಲ್ಲಿ ಇರುವ ಎಂಪೋರಿಯಂ ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟಿಸಲಾಯಿತು.
ಅನಿವಾಸಿ ಭಾರತೀಯ ಉದ್ಯಮಿ ಮೈಕಲ್ ಡಿಸೋಜ ಅವರು ಉದ್ಘಾಟಿಸಿದರು. ಕಂಕನಾಡಿ ಫಾದರ್ ಮುಲ್ಲರ್ಸ್ ಚಾರಿಟಬಲ್ ಸಂಸ್ಥೆಗಳ ನಿರ್ದೇಶಕ ವಂದನೀಯ ಫಾದರ್ ಫೌಸ್ಟಿನ್ ಲೋಬೊ ಆಶೀರ್ವದಿಸಿದರು.
ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅವರು ಅಧ್ಯಕ್ಷತೆ ವಹಿಸಿದ್ದರು. ಜೆಪ್ಪುವಿನ ಸೇಂಟ್ ಆ್ಯಂಟನಿ ಆಶ್ರಮದ ನಿರ್ದೇಶಕ ವಂದನೀಯ ಫಾದರ್ ಜೆ.ಬಿ.ಕ್ರಾಸ್ತಾ, ಬೆಂದೂರಿನ ಸೇವಾನಿಲಯ ಕಾನ್ವೆಂಟ್ನ ಸುಪೀರಿಯರ್ನ ಸಿಸ್ಟರ್ ಸಿಂತಿಯಾ ಡಿಸೋಜ, ಮತ್ತು ಕೊಂಕಣಿ ಸಾಂಸ್ಕೃತಿಕ ಸಂಸ್ಥೆ (ಕೆಸಿಒ) ಅಧ್ಯಕ್ಷ ಲಿಯೋ ರೋಡ್ರಿಗಸ್ ಇದ್ದರು.
ಈ ವೇಳೆ ಅನಿಲ್ ಲೋಬೊ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಆಧುನೀಕರಣ ಮತ್ತು ಹೊಸ ಆಲೋಚನೆಗಳನ್ನು ನಿರೀಕ್ಷಿಸುತ್ತಾರೆ. ನಮ್ಮ ಬ್ಯಾಂಕ್ ಅದನ್ನು ಹೇಗೆ ಸಾಧಿಸುವುದು ಎಂಬುದರ ಸ್ಪಷ್ಟ ದೃಷ್ಟಿಕೋನದೊಂದಿಗೆ ಡಿಜಿಟಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಎಲ್ಲಾ 16 ಶಾಖೆಗಳನ್ನು ನವೀಕರಿಸಿದೆ ಎಂದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಮಂಗಳೂರಿನ ದಿ ವೈಟ್ ಡವ್ಸ್ ಸೈಕಿಯಾಟ್ರಿಕ್ ನರ್ಸಿಂಗ್ ಮತ್ತು ಡೆಸ್ಟಿಟ್ಯೂಟ್ ಹೋಂನ ಸಂಸ್ಥಾಪಕಿ ಕೊರಿನ್ ರಸ್ಕಿನ್ಹಾ ಅವರನ್ನು ಸನ್ಮಾನಿಸಲಾಯಿತು.
ಮೈಕೆಲ್ ಡಿಸೋಜ ಅವರನ್ನು ಗೌರವಿಸಲಾಯಿತು. ಐವಾನ್ ಫ್ರಾಂಕ್ ಅವರನ್ನು ಗೌರವಿಸಲಾಯಿತು. ಈಚೆಗೆ ಬಿಡುಗಡೆಯಾದ ಕೊಂಕಣಿ ಚಲನಚಿತ್ರ ‘ಬಾಪಾಚೆ ಪುತಾಚೆ ನಾವಿ’ ದಲ್ಲಿ ನಟಿಸಿರುವ ಮೆಲ್ವಿನ್ ಡಿಅಲ್ಮೇಡಾ ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ಕಂಕನಾಡಿ ಶಾಖಾ ನಿರ್ದೇಶಕ ಹೆರಾಲ್ಡ್ ಮೊಂತೇರೊ, ನಿರ್ದೆಶಕ ಮೆಲ್ವಿನ್ ವಾಸ್, ಸಿ.ಜಿ.ಪಿಂಟೊ, ಜೆ.ಪಿ.ರೊಡ್ರಿಗಸ್, ಐರೀನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜ, ರೋಶನ್ ಡಿಸೋಜ, ಫೆಲಿಕ್ಸ್ ಡಿಕ್ರೂಜ್, ಆಲ್ವಿನ್ ಮೊಂತೇರೊ, ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್, ಶಾಖಾ ವ್ಯವಸ್ಥಾಪಕಿಐಡಾ ಪಿಂಟೊ, ಸಿಬ್ಬಂದಿ ಸದಸ್ಯರು ಇದ್ದರು.


