
ಕಾರವಾರ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಜೈಲರ್ ಹಾಗೂ ಮೂರು ಮಂದಿ ಸಿಬ್ಬಂದಿ ಮೇಲೆ ಮಾದಕ ವಸ್ತುವನ್ನು ನಿಷೇಧ ಮಾಡಿದ್ದರಿಂದ ರೌಡಿಗಳ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಕೂಡಲೇ ಎಚ್ಚೆತ್ತ ಪೊಲೀಸ್ ಸಿಬ್ಬಂದಿ ಮಾದಕ ಪದಾರ್ಥದ ಬದಲು ಲಾಠಿ ಬೀಸಿ ಮುಟ್ಟಿಸಿದ್ದಾರೆ.
ಮಂಗಳೂರು ಜೈಲಿನಿಂದ ಕಾರವಾರ ಕಾರಾಗೃಹದಲ್ಲಿ ಬಂಧಿ ಆಗಿರುವ ಮಂಗಳೂರು ಮೂಲಲ ಮೊಹಮ್ಮದ್ ಅಬ್ದುಲ್ ಫಯಾನ್ ಹಾಗೂ ಕೌಶಿಕ್ ನಿಹಾಲ್ ಎಂಬ ಆರೋಪಿಗಳು ಮಾದಕ ಪದಾರ್ಥಗಳ ಬಳಕೆ ಜೈಲಿನಲ್ಲಿ ಸಂಪೂರ್ಣ ನಿಷೇಧ ಮಾಡಿದ್ದರಿಂದ ದಾಳಿ ಮಾಡಿದ್ದರು.
ಜೈಲರ್ ಕಲ್ಲಪ್ಪ ಗಸ್ತಿ ಹಾಗೂ ಇಬ್ಬರು ಸಿಬ್ಬಂದಿಮೇಲೆ ಆರೋಪಿಗಳು ಕಲ್ಲು ಎಸೆದು ಬಟ್ಟೆ ಹರಿದು ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಜೈಲರ್ ಮತ್ತು ಸಿಬ್ಬಂದಿಯನ್ನು ತಕ್ಷಣವೇ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಕಾಯತಿ ಸೇರಿ 12 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಈ ರೌಡಿಗಳನ್ನು ಮಂಗಳೂರು ಜೈಲಿನಿಂದ ಕಾರವಾರಕ್ಕೆ ಈಚೆಗೆ ಸ್ಥಳಾಂತರ ಮಾಡಲಾಗಿತ್ತು.
ಹಲ್ಲೆ ನಡೆಸಿದವರ ಮೇಲೆ ನಿಗಾ ಇಡಲಾಗಿದ್ದು, ಕಾರಾಗೃಹದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.


