

ಮಂಗಳೂರು: ಸರ್ವೋಚ್ಛ ನ್ಯಾಯಾಲಯದ ಆದೇಶದ ಮಾರ್ಗಸೂಚಿ ಯಂತೆ ಬೀದಿ ನಾಯಿಗಳಿಗೆ ಸೂಕ್ತ ಜಾಗದಲ್ಲಿ ಪುನರ್ವಸತಿ ಕಲ್ಪಿಸುವ ಅಗತ್ಯ ಇದೆ. ಇದಕ್ಕಾಗಿ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸೂಕ್ತ ಜಾಗವನ್ನು ನಿಗದಿಪಡಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ಹೊರವಲಯದ ಕುಂಪಲ ಎಂಬಲ್ಲಿ ಬೀದಿ ನಾಯಿಯೊಂದು ವ್ಯಕ್ತಿಯೊಬ್ಬರಿಗೆ ಭೀಕರ ರೀತಿಯಲ್ಲಿ ಹಲ್ಲೆ ಮಾಡಿ ಸಾವಿಗೆ ಕಾರಣವಾಗಿರುವ ವಿಷಯವನ್ನು ಸಭೆಯ ಆರಂಭದಲ್ಲಿ ಪ್ರಸ್ತಾಪಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೃತ ವ್ಯಕ್ತಿ ಕುಟಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಸವೋಚ್ಛ ನ್ಯಾಯಾಲಯದ ಆದೇಶದ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿರುವ ಬೀದಿನಾಯಿಗಳ್ನು ಸೂಕ್ತ ಜಾಗಕ್ಕೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಿ ಶಾಶ್ವತವಾಗಿ ವ್ಯವಸ್ಥೆ ಮಾಡಬೇಕಿದೆ. ಇದಕ್ಕಾಗಿ ಟೆಂಡರ್ ಮೂಲಕ ಏಜೆನ್ಸಿಗೆ ಸೂಚಿಸಲಾಗಿದೆ. ಸದ್ಯ ಜಾಗ ಲಭ್ಯವಿಲ್ಲ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಅರುಣ್ ಕುಮಾರ್ ಶೆಟ್ಟಿ ಸಭೆಗೆ ತಿಳಿಸಿದರು.
ನಗರ ಹಾಗೂ ಗ್ರಾಮಾಂತರ ಪ್ರದೇಶದ ಹಲವು ಕಡೆ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ಶಾಲಾ ಆವರಣ, ಸುತ್ತುಲಿನ ಪ್ರದೇಶಗಳಲ್ಲೂ ಬೀದಿ ನಾಯಿಗಳ ಹಾವಳಿಯಿಂದ ಮಕ್ಕಳು, ಪೋಷಕರು ಆತಂಕದಿಂದಲೇ ಓಡಾಡುವಂತಾಗಿದೆ.ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಇತರ ಶಾಸಕರು ಹಾಗೂ ನಾಮನಿರ್ದೇಶಿತ ಸದಸ್ಯರು ಆಗ್ರಹಿಸಿದರು.
ಮೃತ ವ್ಯಕ್ತಿ ಕುಟುಂಬಕ್ಕೆ ಪರಿಹಾರ ನೀಡುವ ಚರ್ಚೆಯ ವೇಳೆ ಪ್ರತಿಕ್ರಿಯಿಸಿದ ಅಧಿಕಾರಿ ಡಾ. ಅರುಣ್ ಕುಮಾರ್, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಾಯಿ ಕಡಿತಕ್ಕೆ 5000 ರೂ. ಪರಿಹಾರ ಹಾಗೂ ಮೃತಪಟ್ಟಲ್ಲಿ 5 ಲಕ್ಷ ರೂ.ವರೆಗೆ ಪರಿಹಾರ ನೀಡುವ ಅವಕಾಶ ಇದೆ ಎಂದರು.
ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ ಸಚಿವರು, ಬೀದಿನಾಯಿಗಳಿಗೆ ಪುನರ್ವಸತಿ ಕಲ್ಪಿಸುವಲ್ಲಿಯೂ ಜಾಗ ಗುರುತಿಸಿ ಅವುಗಳನ್ನು ಸ್ಥಳಾಂತರಿಸಿ, ಅವುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದರು.
ಸಾಮಾಜಿಕ ಅರಣ್ಯ ವಿಭಾಗಕ್ಕೆ ಸಂಬಂಧಿಸಿದಂತೆ ರಸ್ತೆ ಬದಿಗಳಲ್ಲಿ ಹಣ್ಣು ಹಂಪಲುಗಳ ಗಿಡಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ, ಪುತ್ತೂರಿನಲ್ಲಿ ಆರ್‌ಟಿಒ ಟ್ರ್ಯಾಕ್ ನಿರ್ಮಾಣಕ್ಕಾಗಿ 9 ಕೋಟಿ ರೂ. ಅನುದಾನ ಮಂಜೂರಾಗಿ ಒಂದು ವರ್ಷವಾಗಿದೆ. ಆದರೆ, ಸಾಮಾಜಿಕ ಅರಣ್ಯ ಜಾಗದಲ್ಲಿರುವ ಮರಗಳನ್ನು ತೆರವುಗೊಳಿಸುವ ಕಾರ್ಯ ಆಗದೆ, ಅನುದಾನ ಹಿಂದಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಕೇಶಿಯಾ ಹಾಗೂ ನೀಲಗಿರಿ ಮರಗಳನ್ನು ತೆರವುಗೊಳಿಸಲು ಈಗಾಗಲೇ ಆದೇಶವಾಗಿದ್ದರೂ ಕ್ರಮ ಆಗುತ್ತಿಲ್ಲ. ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು ಎಂದು ಬೋಜೇಗೌಡರು ಹೇಳಿದಾಗ, 2017-18ರಿಂದ ಹೊಸ ನೀಲಗಿರಿ ಅಥವಾ ಅಕೇಶಿಯಾ ಮರಗಳನ್ನು ನೆಡಲಾಗುತ್ತಿಲ್ಲ. ಪ್ರತಿ ವರ್ಷ ಈ ಮರಗಳ ತೆರವು ಕಾರ್ಯ ನಡೆಯತ್ತಿದೆ. 470 ಹೆಕ್ಟೇರ್ ಈ ವರ್ಷ ಕ್ಲಿಯರ್ ಆಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ ತಿಳಿಸಿದರು.
ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ಹಾಗೂ ನೀಲಗಿರಿ ಮರಗಳ ತೆರವಿಗೆ ಇರುವ ನಿರ್ಬಂಧದ ಕುರಿತು ರಾಜ್ಯ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಸಂಪೂರ್ಣ ತೆರವುಗೊಳಿಸಲು ಕ್ರಮ ವಹಿಸಬೇಕು ಎಂದು ಬೋಜೇಗೌಡರು ಸಲಹೆ ನೀಡಿದರು.
ಸಭೆಯಲ್ಲಿ ಶಾಸಕರಾದ ಡಾ. ಭರತ್ ಶೆಟ್ಟಿ, ಹರೀಶ್ ಪಂಜ, ಭಾಗೀರಥಿ ಮುರಳ್ಯ, ಪ್ರತಾಪ್ ಸಿಂಹ ನಾಯಕ್, ಜಿ.ಪಂ. ಸಿಇಒ ವಿನಾಯಕ ನರ್ವಾಡೆ, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಎಸ್ಪಿ ಅರುಣ್ ಕುಮಾರ್, ನಾಮ ನಿರ್ದೇಶಿತ ಸದಸ್ಯರು ಇದ್ದರು.
ಕೆಂಪು ಕಲ್ಲಿನ ದರ ಕುರಿತು ಸಭೆಯಲ್ಲಿ ಪ್ರತಿಧ್ವನಿ
ಕೆಂಪುಕಲ್ಲು ಗಣಿಗಾರಿಕೆ ಮೇಲಿನ ರಾಜಧನ ಕಡಿಮೆ ಆಗಿದ್ದರೂ ಕೆಂಪು ಕಲ್ಲಿನ ದರ ಕಡಿಮೆ ಆಗಿಲ್ಲ. ಇದರಿಂದ ಮನೆ ನಿರ್ಮಾಣ ಸೇರಿದಂತೆ ಸಾರ್ವಜನಿಕ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೂ ತೊಡಕಾಗಿದೆ ಎಂಬ ಆಕ್ಷೇಪ ಸಭೆಯಲ್ಲಿ ವ್ಯಕ್ತವಾಯಿತು.
ಕೆಂಪು ಕಲ್ಲಿನ ಗಣಿಗಾರಿಕೆಗೆ ನೀಡುತ್ತಿರುವ ಪರವಾನಗಿ ಸಂಖ್ಯೆ ಹೆಚ್ಚಳವಾದಾಗ ದರ ಕಡಿಮೆ ಆಗಲಿದೆ. ಕೆಂಪು ಕಲ್ಲು ತೆಗೆಯಲು ಒಂದು ಕಲ್ಲಿಗೆ 28 ರೂಪಾಯಿಯಿಂದ 30 ರೂ. ದರವಿದೆ. ಆದರೆ ಬೇಡಿಕೆ ಹೆಚ್ಚಿದ್ದು, ಸೀಮಿತ ಕಡೆಗಳಲ್ಲಿ ಮಾತ್ರವೇ ಕಲ್ಲು ತೆಗೆಯಲು ಅವಕಾಶ ಇರುವುದರಿಂದ ಜಿಲ್ಲೆಯ ವಿವಿಧ ಕಡೆಗೆ ಪೂರೈಕೆಗೆ ಲಾರಿಗಳ ಸಾಗಾಟ ದರ ಹೆಚ್ಚಳ ಆಗುತ್ತಿದೆ. ಈಗಾಗಲೇ 60 ರೂ.ಗಳಿದ್ದ ದರ 45 ರೂ.ಗಳವರೆಗೆ ಇಳಿಕೆಯಾಗಿದೆ. ಹೆಚ್ಚು ಪರವಾನಗಿ ದೊರಕಿದಾಗ ದರವೂ ಇಳಿಕೆಯಾಗಲಿದೆ ಎಂದರು.
ಅಧಿಕಾರಿ ಗೈರು ಹಾಜರಿ, ಸಭೆಯಲ್ಲಿ ಭೋಜೆಗೌಡ ಆಕ್ರೋಶ
ಮೆಸ್ಕಾಂಗೆ ಸಂಬಂಧಿಸಿದ ಚರ್ಚೆಯ ಸಂದರ್ಭ ವ್ಯವಸ್ಥಾಪಕ ನಿರ್ದೇಶಕರು ಸಭೆಯಲ್ಲಿ ಹಾಜರಿಲ್ಲದೇ ಇರುವ ಬಗ್ಗೆ ಜನಪ್ರತಿನಿಧಿಗಳಿಂದ ಆಕ್ಷೇಪ ವ್ಯಕ್ತವಾಯಿತು. ಈ ಹಿಂದಿನ ಸಭೆಗಳಲ್ಲೂ ಅವರು ಹಾಜರಿರುವಂತೆ ತಿಳಿಸಲಾಗಿದ್ದರೂ ಮತ್ತೆ ನಿರ್ಲಕ್ಷ್ಯ ತೋರಲಾಗಿದೆ. ಸಕಾರಣ ನೀಡದೆ ಸಭೆಗೆ ಗೈರು ಹಾಜರಿ ಆಗಿರುವವ ವಿರುದ್ಧ ಕ್ರಮ ವಹಿಸಬೇಕು ಬೋಜೇಗೌಡರು ಆಗ್ರಹಿಸಿದರು.
ನಾನು ಕೂಡ ಹೊಸ ಎಂಡಿ ನೋಡಿಲ್ಲ. ಯಾವ ಸಭೆಗೂ ಬಂದಿಲ್ಲ ಎಂದು ಉಸ್ತುವಾರಿ ಸಚಿವರು ಹೇಳಿದಾಗ, ಜನಪ್ರತಿನಿಧಿಗಳು ಕ್ರಮಕ್ಕೆ ಆಗ್ರಹಿಸಿ, ಈ ಬಗ್ಗೆ ಎಚ್ಚರಿಕೆ ನೋಟೀಸ್ ನೀಡಿ ಕ್ರಮ ಕೈಗೊಳ್ಳುವಂತೆ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.

