

ಕಲಬುರಗಿ: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನ ಕೊನೆಗೂ ಭರ್ಜರಿ ಯಶಸ್ವಿ ಕಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ತವರಿನಲ್ಲಿ ಭಗವಾಧ್ವಜ ಹಾರಿಸಿ ಆರ್‌ಎಸ್‌ಎಸ್ ಕಾರ್ಯಕರ್ತರು ಒಂದೂವರೆ ಕಿಲೋ ಮೀಟರ್ ರಸ್ತೆಯುದ್ದಕ್ಕೂ ಹೆಜ್ಜೆ ಹಾಕಿದರು.
ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಿಂದ ಅಂಬೇಡ್ಕರ್ ಸರ್ಕಲ್, ಬಸವ ಆಸ್ಪತ್ರೆ, ಎಚ್‌ಡಿಎಫ್‌ಸಿ ಬ್ಯಾಂಕ್ ರಸ್ತೆ, ಬಸವೇಶ್ವರ ಸರ್ಕಲ್ ಮೂಲಕ ಸಾಗಿ ಬಜಾಜ್ ಕಲ್ಯಾಣ ಮಂಟಪದಲ್ಲಿ ಪಥಸಂಚಲನ ಮುಕ್ತಾಯ ಆಯಿತು. ಹೈಕೋರ್ಟ್ ಆದೇಶದಂತೆ 300 ಮಂದಿ ಗಣವೇಷಧಾರಿಗಳು ಹಾಗೂ 50 ಜನ ಬ್ಯಾಂಡ್ ವಾದಕರಿಗೆ ಮಾತ್ರ ಪಥಸಂಚಲನದಲ್ಲಿ ಅವಕಾಶ ನೀಡಲಾಗಿತ್ತು.

ಗಣವೇಷಧಾರಿಗಳಿಗೆ ಮಹಿಳೆಯರು, ಮಕ್ಕಳು, ಸಾರ್ವಜನಿಕರು ಪುಷ್ಪಾರ್ಚನೆಯ ಭವ್ಯ ಸ್ವಾಗತ ನೀಡಿದ್ದು ವಿಶೇಷ ಆಗಿತ್ತು. ರಸ್ತೆ ಎರಡೂ ಬದಿಯಲ್ಲಿ ನಿಂತು ಗಣವೇಷಧಾರಿಗಳ ಮೇಲೆ ಹೂವಿನ ಮಳೆ ಸುರಿಸಿದರು. ಮಧ್ಯಾಹ್ನ 3.45 ಕ್ಕೆ ಆರಂಭವಾದ ಪಥ ಸಂಚಲನ 4.22 ಗಂಟೆಗೆ ಕೊನೆಗೊಂಡಿತು. ಸುಮಾರು 47 ನಿಮಿಷ ಕಾಲ ಒಟ್ಟು 1.25 ಕಿಲೋ ಮೀಟರ್ ಪಥಸಂಚಲನ ನಡೆಯಿತು.
ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರು. ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ಪೊಲೀಸ್ ಇನ್ ಸ್ಪೆಕ್ಟರ್, ಕೆಎಸ್‌ಆರ್‌ಪಿ ಡಿಎಆರ್ ತುಕಡಿ ಸೇರಿದಂತೆ 650 ಪೋಲಿಸರು, 250 ಮಂದಿ ಹೋಂ ಗಾರ್ಡ್ ನಿಯೋಜನೆ ಮಾಡಲಾಗಿತ್ತು. ಪುರಸಭೆಯಿಂದ 12 ಹಾಗೂ ಪೋಲಿಸ್ ಇಲಾಖೆಯಿಂದ 44 ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. 5 ಡ್ರೋಣ್ ಕ್ಯಾಮೆರಾ ಮೂಲಕ ಖಾಕಿ ಪಡೆ ಹದ್ದಿನ ಕಣ್ಣಿಟ್ಟಿತ್ತು. ಚಿತ್ತಾಪುರ ಹೊರತುಪಡಿಸಿ ಬೇರೆ ಕಡೆಯಿಂದ ಆಗಮಿಸಿದ ಕಾರ್ಯಕರ್ತರಿಗೆ ಪಥಸಂಚಲನದಲ್ಲಿ ಪಾಲ್ಗೊಳ್ಳಲು ಪೊಲೀಸರು ಅವಕಾಶ ನೀಡಲಿಲ್ಲ.

