ಕಾರವಾರ: ಈ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಜಿಲ್ಲೆಯ ರೈತರಿಂದ ಭತ್ತವನ್ನು ಖರೀದಿಸಲು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ರೈತರನ್ನು ನೋಂದಣಿ ಮಾಡಲು ನೋಂದಣಿ ಕೇಂದ್ರ ಆರಂಭ ಮಾಡುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರು ಸೂಚನೆ ನೀಡಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವ ಬಗ್ಗೆ ಜಿಲ್ಲಾ ಮಟ್ಟದ ಕಾರ್ಯ ಪಡೆಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಪ್ರಸಕ್ತ ಸಾಲಿಗೆ ಬೆಂಬಲ ಬೆಲೆ ಯೋಜನೆ ಅಡಿ ಸಾಮಾನ್ಯ ಭತ್ತ ಪ್ರತೀ ಕ್ವಿಂಟಲ್ ಗೆ ರೂಪಾಯಿ 2369 ಮತ್ತು ಗ್ರೇಡ್ ಎ ಭತ್ತಕ್ಕೆ ರೂ. 2389 ನಿಗದಿ ಪಡಿಸಿದ್ದು, ಜಿಲ್ಲೆಯ ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ಭತ್ತವನ್ನು ಖರೀದಿಸಲು ಅನುಕೂಲವಾಗುವಂತೆ ಎಲ್ಲಾ ತಾಲೂಕುಗಳಲ್ಲಿ ನೋಂದಣಿ ಕೇಂದ್ರಗಳನ್ನು ತೆರೆಯುವಂತೆ ತಿಳಿಸಿದರು.
ಟಿಎಪಿಸಿಎಂಎಸ್ ಕೇಂದ್ರಗಳ ಮುಖಾಂತರ ಭತ್ತ ಖರೀದಿಸಲು ಅನುಕೂಲವಾಗುವಂತೆ ನೋಂದಣಿ ಕೇಂದ್ರ ತೆರೆಯಬೇಕು, ಖರೀದಿ ಕೇಂದ್ರಗಳು ಸೂಕ್ತ ಗೋದಾಮು ಮತ್ತು ಅಗತ್ಯ ಮೂಲ ಸೌಕರ್ಯಗಳನ್ನು ಹೊಂದಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಎಫ್‌ಎಕ್ಯೂ ಗುಣಮಟ್ಟವನ್ನು ದೃಢೀಕರಿಸಲು ಪ್ರತೀ ಕೇಂದ್ರದಲ್ಲಿ ಗುಣಟ್ಟ ಪರೀಕ್ಷಕರನ್ನು ನೇಮಿಸಬೇಕು ಮತ್ತು ಖರೀದಿ ಅಧಿಕಾರಿಗಳನ್ನು ನೇಮಿಸಬೇಕು ಎಂದರು.
ರೈತರಿಂದ ಪ್ರತೀ ಎಕರೆಗೆ 25 ಕ್ವಿಂಟಲ್ ನಂತೆ ಗರಿಷ್ಠ 50 ಕ್ವಿಂಟಲ್ ಭತ್ತವನ್ನು ಖರೀದಿಸಬಹುದಾಗಿದ್ದು, ರೈತರಿಂದ ಖರೀದಿಸಿದ ಭತ್ತದ ಹಣವನ್ನು ಡಿಬಿಟಿ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುವುದು. ಖರೀದಿ ಕೇಂದ್ರಗಳಲ್ಲಿ ಸಂಗ್ರಹವಾದ ಭತ್ತವನ್ನು ಹಲ್ಲಿಂಗ್ ಮಾಡಲು ಗಿರಣಿ ಮಾಲೀಕರನ್ನು ಗುರುತಿಸಬೇಕು ಎಂದರು.
ಕೃಷಿ ಇಲಾಖೆಯ ಮಾಹಿತಿಯಂತೆ ಜಿಲ್ಲೆಯಲ್ಲಿ 40626.30 ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗಿದ್ದು, ಅಂದಾಜು 10,95058 ಕ್ವಿಂಟಲ್ ಭತ್ತದ ಇಳುವರಿಯ ನಿರೀಕ್ಷೆಯಿದ್ದು ಇದಕ್ಕೆ ಅನುಗುಣವಾಗಿ ನೋಂದಣಿ ಕೇಂದ್ರ ಮತ್ತು ಖರೀದಿ ಕೇಂದ್ರ ತೆರೆಯಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ್ ಗಾಂವಕರ್, ಆಹಾರ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ರೇವಣ್‌ಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.