ಮಂಗಳೂರು: ಶಾರದಾ ವಿದ್ಯಾನಿಕೇತನ ಶಿಕ್ಷಣ ಸಮುಚ್ಚಯ ದೇವಿನಗರ ತಲಪಾಡಿಯಲ್ಲಿ ಶಾರದಾ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾರದಾ ಪದವಿ ಕಾಲೇಜು, ಶಾರದಾ ವಿದ್ಯಾನಿಕೇತನ ಪದವಿಪೂರ್ವ ಕಾಲೇಜು ಮತ್ತು ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನ ವಸತಿ ನಿಲಯದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾರದಾ ಪೂಜೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಸಂಸ್ಥೆಯ ಚಿತ್ರಕಲಾ ಶಿಕ್ಷಕ ಮನೋಜ್ ಮತ್ತು ರೇಖಾ ಅವರ ಅಪ್ರತಿಮ ಕೌಶಲದಿಂದ ಶಾರದೆಯನ್ನು ಹಂಸತೂಲಿ ಕಾತಲ್ಪದಲ್ಲಿ ಕೂರಿಸಿ ಅಲಂಕರಿಸಿ ಸಭೆಗೊಂದು ಅವರ್ಣನೀಯವಾದ ಧಾರ್ಮಿಕ ಕಳೆ ತಂದು ಕೊಟ್ಟಿದ್ದರು. ಹಿರಿಯ ಶಿಕ್ಷಕರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಆರಂಭಿಸಿದರು. ಮೊದಲಿಗೆ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಶಾರದೆ ಭಜಿಸಿದರು, ನಂತರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಜನೆಯನ್ನು ಮುಂದುವರೆಸಿದರು.
ನಂತರ ಶಾರದಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಜನೆ ಮಾಡಿದರು. ನೆರೆದ ವಿದ್ಯಾರ್ಥಿ ಸಮೂಹ ಮಹಾಲಕ್ಷ್ಮಿ ಅಷ್ಟಕ ಮತ್ತು ಮಹಿಷ ಮರ್ದಿನಿ ಸ್ತೋತ್ರ ಸಾಮೂಹಿಕ ಹಾಡಿದರು. ಸಂಸ್ಥೆಯ 5ನೇ ತರಗತಿ ವಿದ್ಯಾರ್ಥಿನಿಯನ್ನು ಕನ್ನಿಕಾ ಪೂಜೆಗೆ ಆಯ್ಕೆ ಮಾಡಿ ಅವಳಿಗೆ ಶಾರದೆ ಅಲಂಕಾರವನ್ನು ಮಾಡಿ ವೇದಿಕೆಯಲ್ಲಿ ಕೂರಿಸಿ ಕನ್ನಿಕಾ ಪೂಜೆಯನ್ನು ಸಲ್ಲಿಸಿದ ಪರಿ ಮೈಮನ ಮುದಗೊಳಿಸುವಂತಿತ್ತು. ಪುಟ್ಟ ಶಾರದೆಯ ಗಾಂಭೀರ್ಯ , ಹಸನ್ಮುಖ ಅವಳಿಗೆ ದೈವಿ ಕಳೆಯನ್ನೇ ಕೊಟ್ಟಿತ್ತು. ಸಂಸ್ಥೆಯ ಅಧ್ಯಕ್ಷ ಡಾ. ಎಂ. ಬಿ. ಪುರಾಣಿಕ ಅವರ ಪತ್ನಿ ಸುನಂದಾ ಪುರಾಣಿಕ್ ಮತ್ತು ಗಣಿತಶಾಸ್ತ್ರದ ಉಪನ್ಯಾಸಕಿ ಸುಮನಾ ಅವರು ಕನ್ನಿಕಾ ಪೂಜೆ ನೆರವೇರಿಸಿದರು.
ಈ ವೇಳೆ ಡಾ. ಎಂ. ಬಿ. ಪುರಾಣಿಕ ಅವರು ಮಾತನಾಡಿ, ಶಾರದಾ ಪೂಜೆಯ ಮಹತ್ವ ಅನಿವಾರ್ಯತೆ ಮತ್ತು ಅದರ ಫಲ ಇವುಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು.
ಸಂಸ್ಥೆಯ ನಿರ್ದೇಶಕ ಸಮೀರ್ ಪುರಾಣಿಕ್ ಅವರು ಶಾರದಾ ಪೂಜೆಯಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಒಳಗೊಳ್ಳುವಿಕೆ ಹಾಗು ತಲ್ಲೀನತೆ ಶ್ಲಾಘಿಸಿದರು.
ಶಾರದೆ ಅಲಂಕಾರ ಮಾಡಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಮುಕ್ತ ಕಂಠದಿಂದ ಹೊಗಳಿ ಅವರನ್ನು ಶ್ಲಾಘಿಸಿ ಪ್ರೋತ್ಸಾಹಿಸಿದರು. ನಂತರ ಸಂಸ್ಕೃತ ಉಪನ್ಯಾಸಕ ಶುಭಕರ್ ಕೆ ಅವರು ಷೋಡಶೋಪಚಾರ ಪೂಜೆಗಳಿಂದ ಮತ್ತು ಅಷ್ಟಾವಧಾನ ಸೇವೆಗಳಿಂದ ಹಂಸವಾಹಿನಿ ಜ್ಞಾನದಾಯಿನಿಯಾದ ಶಾರದೆಯನ್ನು ಪೂಜಿಸಿ ಮಂಗಳಾರತಿ ಬೆಳಗಿದರು. ನಂತರ ವಿಶೇಷವಾಗಿ ಪಿಯುಸಿ ಕಾಲೇಜಿನ ಗಣಿತ ಉಪನ್ಯಾಸಕ ವಿನೋದ್ ವ್ಯಾಸ್ ದಂಪತಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ಮಿತ್ರರಿಗೆ ಗುಜರಾತಿನ ವೈಶಿಷ್ಟ್ಯ ಪೂರ್ಣ ಗರ್ಭಾ ನೃತ್ಯವನ್ನು ಕಲಿಸಿ ತರಬೇತುಗೊಳಿಸಿ ಪ್ರದರ್ಶಿಸಿದರು. ನೃತ್ಯ ಎಲ್ಲರ ಕಣ್ಮನ ಸೂರೆಗೊಂಡು ಎಲ್ಲರೂ ಮುದಗೊಂಡು ಕುಣಿಯುವಂತೆ ಮಾಡಿತು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ವಿನಾಯಕ ಸೇರಿದಂತೆ ಎಲ್ಲ ಪ್ರಾಂಶುಪಾಲರು ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.