ಉಡುಪಿ: ಮಲ್ಪೆ ಕೊಡವೂರು ಸಮೀಪದ ಸಾಲ್ಮರ ಎಂಬಲ್ಲಿ ಶನಿವಾರ ಹಾಡಹಗಲೆ ಬರ್ಬರ ಕೊಲೆಯಾಗಿದ್ದ ಎಕೆಎಂಎಸ್ ಬಸ್ ಮಾಲೀಕ, ರೌಡಿಶೀಟರ್ ಸೈಫ್ ಯಾನೆ ಸೈಫುದ್ದೀನ್ ಆತ್ರಾಡಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಮಣಿಪಾಲ ಕೆಎಂಸಿ ಆಸ್ಪತ್ರೆಯ ಶವಗಾರದಲ್ಲಿ ನಡೆದಿದ್ದು ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು.
ಮಣಿಪಾಲ ಅವರ ಮನೆಯಿಂದ ಮೃತದೇಹದ ಮೆರವಣಿಗೆ ಆತ್ರಾಡಿ ಮಸೀದಿವರೆಗೆ ನಡೆಯಿತು. ಅವರೇ ಮಾಲೀಕರಾಗಿದ್ದ ಬಸ್ ಗಳು ಮೆರವಣಿಗೆಯಲ್ಲಿ ಸೇರಿಕೊಂಡಿದ್ದು, ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಅತ್ರಾಡಿ ಮಸೀದಿಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ನಂತರ ಧಾರ್ಮಿಕ ವಿಧಿಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ತಿಳಿದು ಬಂದಿದೆ.
ಎಕೆಎಂಎಸ್ ಬಸ್ ಮಾಲೀಕ ಸೈಪು ಯಾನೇ ಸೈಫುದ್ದೀನ್ ಆತ್ರಾಡಿ ಅವರನ್ನು ಹತ್ಯೆ ಮಾಡಲಾಗಿತ್ತು. ಸೈಫುದ್ದೀನ್ ಅವರು ತಮ್ಮ ಮನೆಯಲ್ಲಿ ಒಬ್ಬರೇ ಇರುವ ವೇಳೆ ಆಗಮಿಸಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು. ಸ್ಥಳಕ್ಕೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಡಿವೈಎಸ್ಪಿ ಪ್ರಭು ಡಿ.ಟಿ. ಪರಿಶೀಲನೆ ನಡೆಸಿದ್ದರು.