ಮಂಗಳೂರು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಆರೋಗ್ಯ ಆಗಿರುವವರನ್ನು ಕರೆದು ಗೌರವಿಸುವುದು ಹೃದಯವಂತ ವೈದ್ಯರಿಂದ ಮಾತ್ರ ಸಾಧ್ಯ. ರೋಗಿಗಳನ್ನು ಆಸ್ಪತ್ರೆಗೆ ಆಹ್ವಾನಿಸಿ ಸನ್ಮಾನ ಮಾಡುವುದು ಪುಣ್ಯದ ಕೆಲಸ ಆಗಿದೆ. ಇಂತಹ ಕೆಲಸವನ್ನು ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಮಾಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್. ಆರ್. ತಿಮ್ಮಯ್ಯ ಅವರು ಹೇಳಿದರು.
ಮಂಗಳೂರಿನ ಇಂಡಿಯಾನಾ ಹಾಸ್ಪಿಟಲ್ ಅಂಡ್ ಹಾರ್ಟ್ ಇನ್‌ಸ್ಟಿಟ್ಯೂಷನ್‌ನಲ್ಲಿ ಶನಿವಾರ ವಿಶ್ವ ಹೃದಯ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದ ರೋಗಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳಲ್ಲಿ ಕೊಲೆಸ್ಟ್ರಾಲ್ ಅಂಶ ಊಹೆಗೂ ಮೀರಿ ಇರುವುದು ಪತ್ತೆ ಆಗಿರುವುದು ಆತಂಕಕಾರಿ ವಿಚಾರ ಆಗಿದೆ. ಹೃದಯಕ್ಕೆ ಮಾರಕ ಕೊಲೆಸ್ಟ್ರಾಲ್ ಹೆಚ್ಚಲು ಜೀವನ ಶೈಲಿ ಮತ್ತು ಆಹಾರ ಪದ್ಧತಿಯೇ ಕಾರಣ ಆಗಿದೆ ಎಂದರು.
ಅತಿಯಾದ ಉಪ್ಪು ಮತ್ತು ಸಕ್ಕರೆ ಕಾಯಿಲೆ ನಿಯಂತ್ರಣ ಇಲ್ಲದಿರುವುದು, ನಿರಂತರ ಮೊಬೈಲ್ ಮತ್ತು ಟಿವಿ ವೀಕ್ಷಣೆ, ಒತ್ತಡ, ನಿದ್ದೆಗೆಟ್ಟು ಕೆಲಸ ಮಾಡುವುದು, ಧೂಮಪಾನ, ತಂಬಾಕು ಉತ್ಪನ್ನಗಳ ಬಳಕೆಯಿಂದಾಗಿ ಹೃದಯದ ಕಾಯಿಲೆ ಉಂಟಾಗುತ್ತಿವೆ ಎಂಬ ಆತಂಕ ಉಂಟಾಗಿದೆ.
ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಇಂಟರ್ ವೆನಲ್ ಕಾರ್ಡಿಯಾಲಜಿಸ್ಟ್ ಡಾ. ಯೂಸುಫ್ ಕುಂಬ್ಳೆ ಅವರು ಮಾತನಾಡಿ, ಅವರು ಹೃದಯ ರಕ್ತನಾಳದ ಕಾಯಿಲೆಗೆ ಚಿಕಿತ್ಸೆ ನೀಡುವಲ್ಲಿ ಇಂಡಿಯಾನಾ ಆಸ್ಪತ್ರೆ ಮುಂಚೂಣಿಯಲ್ಲಿದೆ. ರಚನಾತ್ಮಕ ಹೃದಯ ಚಿಕಿತ್ಸಾ ವಿಧಾನವನ್ನು ಪ್ರಾರಂಭಿಸಿದ 6ನೇ ವರ್ಷವನ್ನು ಆಸ್ಪತ್ರೆಯು ಹೆಮ್ಮೆಯಿಂದ ಆಚರಿಸುತ್ತಿದೆ. ವಿಶ್ವಹೃದಯ ದಿನವು ಹೃದಯರಕ್ತನಾಳದ ಕಾಯಿಲೆಗಳು, ಅವುಗಳ ಅಪಾಯಕಾರಿ ಅಂಶಗಳು ಮತ್ತು ತಡೆಗಟ್ಟುವ ತಂತ್ರಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂಡಿಯಾನಾ ಆಸ್ಪತ್ರೆ ಶ್ರಮಿಸುತ್ತಿದೆ ಎಂದರು.
ಶೇ 80 ರಷ್ಟು ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವು ಉಂಟಾಗುತ್ತಿದ್ದು, ಆರಂಭಿಕ ತಪಾಸಣೆ, ಕೈಗೆಟುಕುವ ಆರೈಕೆ, ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆ ಮತ್ತು ದೈಹಿಕವಾಗಿ ಸಕ್ರೀಯವಾಗಿ ಇರುವುದರ ಮೂಲಕ ತಡೆಗಟ್ಟಬಹುದು ಎಂದರು.
ಟಿಎವಿಆರ್ , ಟಿಎವಿಐ, ಟಿಎಂವಿಆರ್, ಟಿಐವಿಆರ್ ಮತ್ತು ಮಿಟ್ರಾಕ್ಲಿಪ್ ಕಾರ್ಯವಿಧಾನ ಗಳಂತಹ ಮುಂದುವರಿದ ರಚನಾತ್ಮಕ ಹಾರ್ಟ್ ಇಂಟರ್ವಶನ್ ಚಿಕಿತ್ಸೆಯನ್ನು ಇಂಡಿಯಾನ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಪಡೆದ ರೋಗಿಗಳನ್ನು ಸನ್ಮಾನಿಸಲಾಯಿತು.
ಇಂಡಿಯಾನಾ ಆಸ್ಪತ್ರೆ ಅಧ್ಯಕ್ಷ ಡಾ. ಅಲಿ ಕುಂಬ್ಳೆ , ಆಸ್ಪತ್ರೆಯ ನಿರ್ದೇಶಕರಾದ ಡಾ. ಆದಿತ್ಯ ಭಾರದ್ವಾಜ, ಡಾ. ಅಪೂರ್ವ ಶ್ರೀಜಯದೇವ, ಸಿಇಒ ವಿಜಯನ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಪ್ರಸಾದ್ ಶೆಟ್ಟಿ ಇದ್ದರು.