Breaking News
KARAVALIDAILYNEWS

ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುರಾಜ್ಯಶಿರಸಿ

ಕುಡ್ಲದ ಪಿಲಿಪರ್ಬ 4ನೇ ಆವೃತ್ತಿಗೆ 30 ರಂದು ಚಾಲನೆ, 10 ತಂಡಗಳ ಸೆಣಸಾಟ, ಅಕ್ಕಿಮುಡಿ ಹಾರಿಸುವುದು ಕಡ್ಡಾಯ: ಶಾಸಕ ಕಾಮತ್

 

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಮಾಜಿ ಸಂಸದ ನಳಿನ್ ಕುಮಾ‌ರ್ ಕಟೀಲ್ ಅವರ ಮಾರ್ಗದರ್ಶನದಲ್ಲಿ ಕುಡ್ಲದ ಪಿಲಿಪರ್ಬದ 4 ನೇ ಆವೃತ್ತಿ ಸ್ಪರ್ಧಾಕೂಟ ಇದೇ 30 ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಬೆಳಿಗ್ಗೆ 9.30 ಕ್ಕೆ ಉದ್ಘಾಟನೆಗೊಳ್ಳಲಿದೆ. ಮೊದಲ ವಿಜೇತ ತಂಡಕ್ಕೆ 5 ಲಕ್ಷ ಮೊತ್ತದ ಬಹುಮಾನ ನೀಡಲಾಗುತ್ತದೆ ಎಂದು ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರಾವಳಿ ಭಾಗದ ಅತ್ಯಂತ ಜನಪ್ರಿಯ ಎಂಬ ಹೆಗ್ಗಳಿಕೆ ಹೊಂದಿರುವ 10 ಹುಲಿವೇಷ ತಂಡ ಭಾಗವಹಿಸಲಿವೆ. ಪ್ರತಿ ತಂಡವೂ ವೈಭವದ ಮೆರವಣಿಗೆ ಮೂಲಕ ವೇದಿಕೆಗೆ ಪ್ರವೇಶ ಮಾಡಲಿದ್ದು, 20 ನಿಮಿಷಗಳ ಪ್ರದರ್ಶನ ನೀಡಲಿವೆ. ಅಕ್ಕಿಮುಡಿ ಹಾರಿಸುವುದು ಕಡ್ಡಾಯ ಆಗಿದ್ದು, ಕರಿ ಹುಲಿಗಳು, ಮರಿಹುಲಿಗಳು, ಹಿಮ್ಮೇಳ, ಧರಣಿ ಮಂಡಲ ಹೀಗೆ ಇಡೀ ಕೂಟವು ವೈವಿಧ್ಯತೆಯಿಂದ ಕೂಡಿರಲಿವೆ ಎಂದು ತಿಳಿಸಿದರು.

  1.  

ಸ್ಪರ್ಧಾಕೂಟದಲ್ಲಿ 6 ಮಂದಿ ತೀರ್ಪುಗಾರರು ಇರಲಿದ್ದು, ನಾಲ್ವರು ವೇದಿಕೆಯಲ್ಲಿ ಮತ್ತು ಇಬ್ಬರು ಒಳಗೆ ವಿಡಿಯೊ ವೀಕ್ಷಣೆ ಮಾಡುವ ಜತೆಗೆ ಥರ್ಡ್ ಅಂಪೈಯರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಹುಲಿವೇಷ ತಂಡ ವೇದಿಕೆಗೆ ಆಗಮಿಸಿ, ಪ್ರದರ್ಶನ ನೀಡಿ ನಿರ್ಗಮಿಸುವವರೆಗಿನ ಎಲ್ಲವನ್ನೂ ವಿಡಿಯೊ ದಾಖಲಿಸಿ, ಅಗತ್ಯ ಬಿದ್ದರೆ ರೀ ಪ್ಲೇ ವೀಕ್ಷಿಸಿ ಬಳಿಕವೇ ಫಲಿತಾಂಶ ಘೋಷಣೆ ಮಾಡಲಾಗುತ್ತದೆ ಎಂದರು.

ತೀರ್ಪುಗಾರರ ತೀರ್ಮಾನವೇ ಅಂತಿಮ. ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಿ ಗೌರವಿಸಲಾಗುವುದು. ಅಲ್ಲದೆ ಶಿಸ್ತಿನ ತಂಡ, ಅತ್ಯುತ್ತಮ ಹುಲಿ ಮೆರವಣಿಗೆ ತಂಡ, ಪರ್ಬದ ಪಿಲಿ, ಕಪ್ಪು ಪಿಲಿ, ಮರಿ ಹುಲಿ, ಮುಡಿ, ಶಾಸೆ, ಬಣ್ಣಗಾರಿಕೆ, ಧರಣಿ ಮಂಡಲ ವಿಭಾಗಗಳಿಗೆ ಪ್ರತ್ಯೇಕ ಬಹುಮಾನ ನೀಡಿ, ಪ್ರತಿ ಹುಲಿವೇಷ ತಂಡಕ್ಕೆ ಗೌರವ ಮೊತ್ತ ನೀಡಲಾಗುವುದು. ಟೀಮ್ ಪರಶುರಾಮ, ಪಾಂಡೇಶ್ವರ ಶಾರದಾ ಹುಲಿ, ಶಿವಶಕ್ತಿ ಟೈಗರ್ಸ್ ಮಂಜೇಶ್ವರ, ಲೆಜೆಂಡ್ ಟೈಗರ್ಸ್ ಕುಡ್ಲ, ಕಾರ್ಕಳ ಟೈಗರ್ಸ್, ಟೀಮ್ ಅಗಸ್ತ್ಯ, ಟ್ಯಾಲೆಂಟ್ ಟೈಗರ್ಸ್, ನಂದಿಗುಡ್ಡ ಫ್ರೆಂಡ್ಸ್ ಬಾಬುಗುಡ್ಡ, ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ (ಎಂಎಫ್‌ಸಿ), ಹಾಗೂ ಅಂತಿಮವಾಗಿ ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್ ತಂಡಗಳು ಪಾಲ್ಗೊಳ್ಳಲಿವೆ ಎಂದರು.

ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಯತೀಶ್ ಬೈಕಂಪಾಡಿ, ಕಿರಣ್ ಶೆಣೈ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಜಗದೀಶ್ ಕದ್ರಿ, ಚೇತನ್ ಕಾಮತ್, ಸಹಾನ್ ಕೋಡಿಕೆರೆ ಇದ್ದರು.

ಸ್ಪರ್ಧೆ ವೀಕ್ಷಣೆಗೆ ದೊಡ್ಡ ಪರದೆ ವ್ಯವಸ್ಥೆ: ಶಾಸಕ
ಕಾರ್ಯಕ್ರಮಕ್ಕೆ ಜಿಲ್ಲೆಯ ಹಾಗೂ ನಾಡಿನ ಖ್ಯಾತನಾಮರು ಆಗಮಿಸಿ ವಿಶೇಷ ಮೆರುಗು ನೀಡಲಿದ್ದು, ಗಣ್ಯರಿಗೆ ವಿಶೇಷ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸ್ಪರ್ಧಾಕೂಟ ನಡೆವ ಮೈದಾನದಲ್ಲಿ 5 ಸಾವಿರ ಮಂದಿ ಕುಳಿತು ವೀಕ್ಷಿಸಬಹುದಾದ ಸುಸಜ್ಜಿತ ಪ್ರೇಕ್ಷಕ ಗ್ಯಾಲರಿ ನಿರ್ಮಿಸಲಾಗಿದ್ದು, ಅಲ್ಲಿಯೇ ದೊಡ್ಡ ಪರದೆ ವ್ಯವಸ್ಥೆ ಮಾಡಲಾಗಿದೆ. ಮನೆಯಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸಲು ನೇರ ಪ್ರಸಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಮೈದಾನದಲ್ಲಿ ಅಚ್ಚುಕಟ್ಟಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮವು ನಿಗದಿತ ಸಮಯಕ್ಕೆ ಸರಿಯಾಗಿ ಆರಂಭವಾಗಿ ರಾತ್ರಿ 10 ಗಂಟೆಯೊಳಗೆ ಕಾರ್ಯಕ್ರಮ ಮುಗಿಯಲಿದೆ ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದರು.

  1.  

Related posts

ಉ.ಕ. ಕಾಂಗ್ರೆಸ್‌ ನ ಅಂಜಲಿಗೆ ಕೈ ಕೊಟ್ಟ ಗ್ಯಾರಂಟಿ, ಅರಳಿದ ಕಮಲ, ಕಾಗೇರಿ ದೆಹಲಿಗೆ

Karavalidailynews

ಹಿರಿಯ ಪತ್ರಕರ್ತ, ವಾಗ್ಮಿ, ನಿರೂಪಕ ಮನೋಹರ್ ಪ್ರಸಾದ್ ನಿಧನ, ಪತ್ರಕರ್ತರ ಸಂಘ ಕಂಬನಿ

Karavalidailynews

ದ.ಕ ಎಸ್ ಪಿ ಸೋನಾವಾಣೆ ಋಷಿಕೇಷ್ ಭಗವಾನ್ ‌ ವರ್ಗಾವಣೆ

Karavalidailynews

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy
WP Twitter Auto Publish Powered By : XYZScripts.com