ಮಂಗಳೂರು: ಕುದ್ರೋಳಿ ಗೋಜರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರು ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ಮಂಗಳೂರು ದಸರಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಂಗಳೂರು ದಸರಾ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.
ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಅಂದಿನ ದೇಶದ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿ ಅವರು, ನಾನು ಬರಿಗೈಯಲ್ಲಿದ್ದಾಗ ನನ್ನನ್ನು ಕರೆದು ಚುನಾವಣೆಗೆ ಸ್ಪರ್ಧೆ ಮಾಡುವಂತೆ ಸೂಚನೆ ನೀಡಿದ್ದರು. ನಾನು ಕೇಂದ್ರ ಸಚಿವ ಆಗಲು ಕಾರಣರಾದರು. ಕುದ್ರೋಳಿ ನವೀಕರಣದ ಬಳಿಕ ದಿ. ಇಂದಿರಾ ಗಾಂಧಿ ಅವರು ಈ ದೇವಸ್ಥಾನವನ್ನು ಉದ್ಘಾಟಿಸಿದರು, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ, ಅವರ ಹೆಸರನ್ನು ಯಾವತ್ತು ಮರೆಯಬಾರದು ಎಂದು ಆಡಳಿತ ಸಮಿತಿ ಅವರಿಗೆ ತಿಳಿಸಿದರು.
ಸ್ಪೀಕರ್ ಯು. ಟಿ. ಖಾದರ್ ಅವರು ಮಂಗಳೂರು ದಸರಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಕುದ್ರೋಳಿಯಲ್ಲಿ ನಡೆಯುತ್ತಿರುವ ಮಂಗಳೂರು ದಸರಾದಲ್ಲಿ ಕಾಣಲು ಸಾಧ್ಯ. ನಾನು ಬಾಲ್ಯದಿಂದಲೂ ರಾಜಕೀಯ ಗುರುಗಳಾದ ಮಾಜಿ ಸಚಿವ ಬಿ ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ದಸರಾ ದೇವಸ್ಥಾನದ ಕೆಲಸ ಗಮನಿಸಿದ್ದೇನೆ. ಕುದ್ರೋಳಿ ಕ್ಷೇತ್ರ ಸೌಹಾರ್ದ ಪರಂಪರೆ ಸಂದೇಶವನ್ನು ದೇಶಕ್ಕೆ ಸಾರುವ ಕೇಂದ್ರ ಎಂದರು.
ಸಚಿವ ರಾಮಲಿಂಗ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಮೈಸೂರು ದಸರಾದ ಬಳಿಕ ರಾಜ್ಯದಲ್ಲಿ ಮಂಗಳೂರು ದಸರಾ ಪ್ರತಿವರ್ಷ ಜನಾಕರ್ಷಣೆ ಪಡೆಯುತ್ತಿದೆ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಅವರ ಕಳಕಳಿಯಿಂದ ದಸರಾ ನಾಡಹಬ್ಬವಾಗಿ ಎಲ್ಲರನ್ನು ಆಕರ್ಷಣೆ ಮಾಡುತ್ತಿದೆ. ಧಾರ್ಮಿಕ ಚಟುವಟಿಕೆಗಳು ನಮ್ಮ ಬದುಕಿನ ಅಂಗವಾಗಿ ಇದೆ ಎಂದರು.
ಸಾಧಕರಿಗೆ ಸನ್ಮಾನ, ಡಾ. ದುರ್ಗಾಪ್ರಸಾದ್ ಗೆ ಗೌರವ
ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ತುಕಾರಾಮ ಪೂಜಾರಿ, ಲೇಡಿಗೋಷನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ .ದುರ್ಗಾಪ್ರಸಾದ್ ಎಂ.ಆರ್ ರವರನ್ನು ಮಂಗಳೂರು ದಸರಾ ಸನ್ಮಾನದ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಅಸಮಾನ್ಯಸ್ತ್ರೀ ಗೌರವವನ್ನು ಶಾಲೆಟ್ ಅವರಿಗೆ ನೀಡಿ ಸನ್ಮಾನಿಸಲಾಯಿತು.
ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಡಾ. ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮುಖ್ಯ ಸಚೇತಕ ಅಶೋಕ್ ದೇವಪ್ಪ ಪಟ್ಟಣ್, ಗಡಿನಾಡ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಜೆ.ಆರ್.ಲೋಬೊ, ಹರೀಶ್ ಕುಮಾರ್, ಕುದ್ರೋಳಿ ಕೇತ್ರಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಸದಸ್ಯ ಎಚ್.ಎಸ್. ಸಾಯಿರಾಂ, ಕ್ಷೇತ್ರಾಭಿವೃದ್ಧಿ ಸಮಿತಿ ಚೇರ್ ಮನ್ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ. ಬಿ.ಜಿ. ಸುವರ್ಣ ,ಟ್ರಸ್ಟಿ ಕೃತೀನ್ ಅಮೀನ್, ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ್, ಲೀಲಾಕ್ಷ ಕರ್ಕೆರಾ,ಸಂತೋಷ್ ಪೂಜಾರಿ ದೇವಳದ ಆಡಳಿತ ಮಂಡಳಿ ಪದಾಧಿಕಾರಿಗಳು ಇದ್ದರು. ಆಡಳಿತ ಸಮಿತಿಯ ಕೋಶಾಧಿಕಾರಿ ಆರ್.ಪದ್ಮರಾಜ್ ಸ್ವಾಗತಿಸಿದರು. ಸ್ಮಿತೇಶ್ ಎಸ್ ಬಾರ್ಯ ನಿರೂಪಿಸಿದರು.