ಮೈಸೂರು: ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅವರ ಅಂತ್ಯಕ್ರಿಯೆ ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರ ಭೂಮಿಯಲ್ಲಿ ನಡೆಯಿತು. ಪತ್ನಿ ಸರಸ್ವತಿ, ಕುಟುಂಬಸ್ಥರು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಹಲವು ಗಣ್ಯರು ಕಣ್ಣೀರಿನ ವಿದಾಯ ಹೇಳಿದರು.
ಪುತ್ರರಾದ ರವಿಶಂಕರ್, ಉದಯ್ ಶಂಕರ್ ಅಂತಿಮ ವಿಧಿಗಳನ್ನು ನೆರವೇರಿಸಿದರು, ಭೈರಪ್ಪ ಅವರ ಇಚ್ಛೆಯಂತೆ ಅಂತ್ಯ ಸಂಸ್ಕಾರದಲ್ಲಿ ಉದಯೋನ್ಮುಖ ಲೇಖಕಿ ಸಹನಾ ವಿಜಯ್ ಕುಮಾರ್ ಇದ್ದರು. ಅಂತಿಮ ವಿಧಿಗಳ ಬಳಿಕ ಪುತ್ರರ ಜತೆಗೆ ಸಹನಾ ವಿಜಯ್‌ಕುಮಾರ್ ಭೈರಪ್ಪ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅಲ್ಲಿಗೆ ಎಸ್. ಎಲ್ ಭೈರಪ್ಪ ಅವರ ದೇಹವು ಪಂಚಭೂತಗಳಲ್ಲಿ ಲೀನವಾದರು.
ಸಕಲ ಸರ್ಕಾರಿ ಗೌರವಗಳೊಂದಿಗೆ ಬ್ರಾಹ್ಮಣ ಸಂಪ್ರದಾಯದಂತೆ ಭೈರಪ್ಪ ಅವರ ಅಂತ್ಯಸಂಸ್ಕಾರ ನಡೆಯಿತು. ಪೊಲೀಸ್ ಅಧಿಕಾರಿ ಶಿವಾನಂದ ನೇತೃತ್ವದ ಹತ್ತು ಜನರ ತಂಡವು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿತು. ನಿನ್ನೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಪಾರ್ಥಿವ ಶರೀರವನ್ನು ಅಂತಿಮ ನಮನಕ್ಕೆ ಇರಿಸಲಾಗಿತ್ತು. ಅಂತಿಮ ದರ್ಶನ ಪಡೆದಿದ್ದ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಭೈರಪ್ಪ ಅವರ ಪ್ರತಿಮೆ ಸ್ಥಾಪಿಸುವುದಾಗಿ ಹೇಳಿದ್ದರು.
ಅಂತ್ಯ ಸಂಸ್ಕಾರದ ಕುರಿತು ಭೈರಪ್ಪ ಅವರು ಉಯಿಲ್ ಬರೆದಿದ್ದಾರೆಂದು ಸುದ್ದಿ ಹಬ್ಬಿತ್ತು. ಅದರಲ್ಲಿ ತನ್ನ ಅಂತ್ಯಸಂಸ್ಕಾರವನ್ನು ಮಕ್ಕಳು ಮಾಡುವುದು ಬೇಡ, ಲೇಖಕಿ ಸಹನಾ ವಿಜಯಕುಮಾರ್ ಮಾಡಬೇಕು ಎಂದು ಬರೆದಿಡಲಾಗಿತ್ತು. ಈ ವಿಲ್ ಪ್ರತಿ ಕೂಡ ಜಾಲತಾಣದಲ್ಲಿ ಹರಿದಾಡಿತ್ತು. ಅವರ ಕೋರಿಕೆಯಂತೆ ಇಬ್ಬರು ಪುತ್ರರ ಜತೆಗೆ ಸಹನಾ ಅವರೇ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ.