ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹತ್ಯೆಗಳ ಪ್ರಕರಣಕ್ಕೆ ಸಂಬಂದಿಸಿದಂತೆ ತನಿಖೆ ಮಾಡುವುದಕ್ಕೆ ರಾಜ್ಯ ಸರಕಾರ ಎಸ್‌ಐಟಿ ರಚನೆ ಮಾಡಿದೇ. ನಾವು ಅವರ ಪರ, ಇವರ ಪರ ಅಲ್ವೇ ಅಲ್ಲ, ನಾವು ಸತ್ಯದ ಪರ ಯಾವಾಗಲೂ ಇರ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ಮಂಗಳೂರಿನಲ್ಲಿ ತಿಳಿಸಿದರು.
ಪ್ರಕರಣದ ತನಿಖೆಗೆ ಎಸ್‌ಐಟಿ ತಂಡವನ್ನು ರಚನೆ ಮಾಡಿದ್ದೇವೆ. ಈ ಹಿಂದೇ ಇದ್ದ ಬಿಜೆಪಿ ಯಾಕೆ ಇಂತಹ ನಿರ್ಧಾರ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದ ಅವರು, ಬಿಜೆಪಿ ಅವರು ಧರ್ಮಸ್ಥಳ ಚಲೋ ಮಾಡಿದ್ದು, ಧರ್ಮಾಧಿಕಾರಿ ಅವರ ಮರ್ಯಾದೆ ಉಳಿಸಲೆಂದು ತಾನೇ? ವೇದಿಕೆ ಇಳಿದು ಸೌಜನ್ಯ ಮನೆಗೆ ಹೋಗಿದ್ದರಲ್ಲ. ಆಗ ಯಾರ ಪರವಾಗಿ ಹೋಗಿದ್ದರು ಎಂದರು.
ಬಿಜೆಪಿಯವರು ಧರ್ಮಾಧಿಕಾರಿ ಅವರ ಪರ ನಾಟಕ ಮಾಡುತ್ತಿದ್ದಾರೆ. ಎರಡು ದೋಣಿಯಲ್ಲಿ ಕಾಲಿಟ್ಟು ಹೋಗುವ ಬಿಜೆಪಿಯವರನ್ನು ಬಿಟ್ಟು ನಮ್ಮಲ್ಲಿ ಪ್ರಶ್ನೆ ಕೇಳಿದರೆ ಏನು ಪ್ರಯೋಜನ. ಯಾರನ್ನಾದರೂ ಗಡೀಪಾರು ಮಾಡಬೇಕು ಎಂದರೆ ಸರಕಾರದ ಮನಸ್ಸಿಗೆ ಬಂದಂತೆ ಮಾಡಲು ಆಗುವುದಿಲ್ಲ, ಕೆಲ ಮಾನದಂಡ ಇರುತ್ತವೆ. ಕೋರ್ಟ್‌ಗೆ ಹೋಗಿ, ಅಲ್ಲಿಯೂ ಚರ್ಚೆ ಮಾಡಲಾಗುತ್ತದೆ, ಕಾರಣ ಇಲ್ಲದೇ ಮಾಡಲು ಆಗುವುದಿಲ್ಲ ಎಂದರು.
ತಿಮರೋಡಿ ಅವರು, ಗಿರೀಶ್ ಮಟ್ಟಣ್ಣನವರ್ ಯಾವ ಗರಡಿಯಲ್ಲಿ ಬೆಳೆದಿದ್ದು, ಅವರೇನು ಕಾಂಗ್ರೆಸ್‌ನವರಾ, ಸೇವಾದಳದವರಾ? ಅವರು ಬಿಜೆಪಿಯವರು, ಗಿರೀಶ್ ಮಟ್ಟಣ್ಣನವರ್ ಬಿಜೆಪಿ ಅಧಿಕೃತ ಅಭ್ಯರ್ಥಿ. ಬಿಜೆಪಿ ಬಿ ಫಾರಂ ತೆಗೆದುಕೊಂಡಿದ್ದಾರೆ. ಇವರೆಲ್ಲ ಇದೇ ಗರಡಿಯಲ್ಲಿ ಬೆಳೆದವರು. ಇದು ಆರ್ ಎಸ್ ಎಸ್ ವರ್ಸಸ್ ಆರ್ ಎಸ್ ಎಸ್ ವಿವಾದ. ದಯವಿಟ್ಟು ಆರ್ ಎಸ್ ಎಸ್ ಜಗಳವನ್ನು ತಂದು ಸರಕಾರಕ್ಕೆ ಹಚ್ಚಬೇಡಿ. ನಾವು ಈ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದರು.
ಎಸ್‌ಐಟಿ ತನಿಖಾಧಿಕಾರಿ ಬಗ್ಗೆ ನಾವು ಮಾತನಾಡಲು ಆಗುವುದಿಲ್ಲ, ತನಿಖೆ ನಡೆಯುತ್ತಿದೆ. ಅಲ್ಲಿ ಏನಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಬಿಜೆಪಿ ಅವರಿಗೆ ಗೊತ್ತಿದ್ದರೆ ಸಂತೋಷ. ಷಡ್ಯಂತ್ರ ಎಂದರೆ ಏನು ಎಂಬುದನ್ನು ಬಿಜೆಪಿ ಅವರು ಹೇಳಲಿ. ಸೌಜನ್ಯ ಪ್ರಕರಣದಲ್ಲೂ ಹೌದು ಎನ್ನುತ್ತಾರೆ. ಧರ್ಮಸ್ಥಳ ಚಲೋ ಅವರೇ ಮಾಡುತ್ತಾರೆ. ಬಿಜೆಪಿ ಅವರು ಆರ್ ಎಸ್ ಎಸ್ ಮತ್ತು ಆರ್ ಎಸ್ ಎಸ್ ನಡುವಿನ ಗಲಾಟೆಯಲ್ಲಿ ಸಿಕ್ಕು ಹಾಕಿಕೊಂಡಿದ್ದಾರೆ. ವೇದಿಕೆ ಹತ್ತಿದಾಗ ಒಂದು, ಇಳಿದಾಗ ಒಂದು ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದರು.